ಉದಯವಾಹಿನಿ, ಬೆಂಗಳೂರು: ಅಪ್ಪ-ಮಕ್ಕಳ ಬ್ಲಾಕ್ ಮೇಲ್‌ನಿಂದ ಪಕ್ಷವನ್ನು ಹೊರತರಬೇಕು, ಇದರ ಬಗ್ಗೆ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಸ್ವಪಕ್ಷದ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ. ಈ ಹೇಳಿಕೆಯು ಬಿಜೆಪಿ ಪಾಳೆಯದಲ್ಲಿ ಮತ್ತೊಮೆ ಬಿರುಗಾಳಿ ಎಬ್ಬಿಸಿದೆ. ಇಷ್ಟು ದಿನ ಯಡಿಯೂರಪ್ಪ ಫ್ಯಾಮಿಲಿ ಜೊತೆ ಚೆನ್ನಾಗಿದ್ದ ರಮೇಶ್ ಜಾರಕಿಹೊಳಿ ಇದ್ದಕ್ಕಿದಂತೆ ಸಿಡಿದೆದ್ದಿದ್ದಾರೆ.ವಿಜಯೇಂದ್ರ ರಾಜ್ಯಾಧ್ಯಕ್ಷನಾಗಿರಬಹುದು. ಆದರೆ ನನಗಲ್ಲ, ನಾನು ಒಪ್ಪುವುದಿಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ನೇರವಾಗಿ ಸಮರ ಸಾರಿದ್ದಾರೆ. ಇದರಿಂದ ಬಿಜೆಪಿ ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಅನ್ನೋದು ಮತ್ತೆ ಸಾಬೀತಾಗಿದೆ.
ಇತ್ತ ಬಸನಗೌಡ ಪಾಟೀಲ್ ಯತ್ನಾಳ್ ಮಾತು ಎತ್ತಿದರೆ ಸಾಕು ಯಡಿಯೂರಪ್ಪ ಕುಟುಂಬದ ವಿರುದ್ಧ ಮುಗಿಬೀಳುತ್ತಾರೆ. ಯತ್ನಾಳ್ ಮತ್ತು ರಮೇಶ್ ಜಾರಕಿಹೊಳಿ ಕೈ ಜೋಡಿಸಿ ವಿಜಯೇಂದ್ರ ವಿರುದ್ಧ ಯುದ್ಧ ಸಾರಿದ್ದಾರೆ. 2019ರಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರವನ್ನು ಕೆಡವಿ ಬಿಜೆಪಿ ಸರ್ಕಾರ ರಚನೆ ಮಾಡುವಲ್ಲಿ ರಮೇಶ್ ಜಾರಕಿಹೊಳಿ ಪಾತ್ರ ಬಹಳ ದೊಡ್ಡದು. ಆ ಸಮಯದಲ್ಲಿ ಕಾಂಗ್ರೆಸ್‌ನ 17 ಶಾಸಕರನ್ನು ಬಿಜೆಪಿಗೆ ಕರೆತಂದಿದ್ದು ಇದೇ ರಮೇಶ್ ಜಾರಕಿಹೊಳಿ. ಬಿಜೆಪಿಗೆ ಬರುವ ಎಲ್ಲರಿಗೂ ಸಚಿವ ಸ್ಥಾನ ಕೊಡುತ್ತೇನೆ. ಅದು ನನ್ನ ಜವಾಬ್ದಾರಿ ಎಂದು ಯಡಿಯೂರಪ್ಪ ಅವರು ರಮೇಶ್ ಜಾರಕಿಹೊಳಿಗೆ ಭರವಸೆ ಕೊಟ್ಟಿರುತ್ತಾರೆ. ಅದರಂತೆ ರಮೇಶ್ ಜಾರಕಿಹೊಳಿ ಜಲ ಸಂಪನೂಲ ಸಚಿವರೂ ಆಗುತ್ತಾರೆ. ಅಲ್ಲಿಂದ ಯಡಿಯೂರಪ್ಪ ಅಂದರೆ ರಮೇಶ್ ಜಾರಕಿಹೊಳಿ ಪಾಲಿಗೆ ದೇವರ ಸಮನಾಗುತ್ತಾರೆ. ಕೊಟ್ಟ ಮಾತು ತಪ್ಪದ ಯಡಿಯೂರಪ್ಪ ಬೆನ್ನಿಗೆ ನಿಂತುಕೊಳ್ಳುತ್ತಾರೆ.
