ಉದಯವಾಹಿನಿ, ರಾಮನಗರ: ತಾಲ್ಲೂಕಿನ ಕೈಲಾಂಚ ಹೋಬಳಿಯ ಅಣ್ಣಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ. 11 ನಿರ್ದೇಶಕರ ಸ್ಥಾನಗಳಿಗೆ ನಡೆದ ಚುನಾವಣೆಗೆ ಸ್ಪರ್ಧಿಸಿದ್ದ ಜೆಡಿಎಸ್ ಬೆಂಬಲಿತರೆಲ್ಲರೂ ಜಯ ಸಾಧಿಸಿದರು.
ಪರಿಶಿಷ್ಟ ಜಾತಿ ಸ್ಥಾನದಿಂದ ಶಿವಣ್ಣ ಮತ್ತು ಬಿಸಿಎಂ ‘ಎ’ ಸ್ಥಾನದಿಂದ ಪುಟ್ಟಮಾರಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿದ ಸಾಮಾನ್ಯ 7 ಮತ್ತು ಮಹಿಳಾ ಮೀಸಲು ಸ್ಥಾನದ 2 ಸ್ಥಾನಗಳಿಗೆ ಸಂಘದ ಆವರಣದಲ್ಲಿ ಇತ್ತೀಚೆಗೆ ಚುನಾವಣೆ ನಡೆಯಿತು. ಮಂಜುನಾಥ್ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.
ಸಾಮಾನ್ಯ ಸ್ಥಾನದಿಂದ ಚಿಕ್ಕಮರಿಯಪ್ಪ, ಪಿ.ಎಸ್. ನಾಗಣ್ಣ, ಪಿ.ಎಲ್. ನಾಗರಾಜು, ಎಸ್. ಪ್ರಕಾಶ್, ಮುತ್ತುರಾಜು, ರಮೇಶ್, ಪಿ.ಎಸ್. ಶಿವರಾಮು ಹಾಗೂ ಮಹಿಳಾ ಸ್ಥಾನದಿಂದ ಗೌರಮ್ಮ, ಭಾಗ್ಯಮ್ಮ ಆಯ್ಕೆಯಾದರು. ವಿಜೇತರಿಗೆ ಹಾಲು ಉತ್ಪಾದಕರು ಹಾಗೂ ಸ್ಥಳೀಯ ಮುಖಂಡರು ಸನ್ಮಾನಿಸಿದರು.
ಈ ವೇಳೆ ಮಾತನಾಡಿದ ಸ್ಥಳೀಯ ಮುಖಂಡ ಎಲ್. ಶಿವರಾಜು, ‘ಸಂಘಕ್ಕೆ 13 ವರ್ಷಗಳಿಂದ ಚುನಾವಣೆ ನಡೆದಿರಲಿಲ್ಲ. ಚುನಾವಣೆ ನಡೆಸುವಂತೆ ಹಲವು ಸಲ ಪ್ರತಿಭಟನೆ ನಡೆಸಿ, ರಾಮನಗರದಲ್ಲಿ ರಸ್ತೆಗೆ ಹಾಲು ಸುರಿದು ಹೋರಾಟ ನಡೆಸಲಾಗಿತ್ತು. ಕಡೆಗೂ ಹೈಕೋರ್ಟ್‌ ಆದೇಶದ ಮೇರೆಗೆ ಚುನಾವಣೆ ನಡೆಯಿತು. ಅಂತಿಮವಾಗಿ ಜೆಡಿಎಸ್‌ ಬಂಬಲಿತರು ಆಯ್ಕೆಯಾಗುವ ಮೂಲಕ, ಸಂಘಕ್ಕೆ ಹೊಸ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದಿದೆ’ ಎಂದರು. ಗ್ರಾಮ ಪಂಚಾಯಿತಿ ಸದಸ್ಯರಾದ ಸೋಮು, ನಾಗರಾಜು ಮುಖಂಡರಾದ ಸಬ್ಬಕೆರೆ ಶಿವಲಿಂಗಪ್ಪ, ತಮ್ಮಯ್ಯಣ್ಣ, ಚಿಕ್ಕಮರಿಯಣ್ಣ, ಶಿವರಾಜು, ಸುಬ್ಬಣ್ಣ, ಶಂಕರಪ್ಪ, ಬಾವಿಹಟ್ಟಿ ಶಿವಣ್ಣ, ಶಿವಮಾದಯ್ಯ, ಶಶಿ, ಶಂಕರ್, ರಮೇಶ್, ನಾಗರಾಜು, ಕಿರಣ್, ಪಿ.ಜಿ. ನಾಗರಾಜು, ದೊಡ್ಡಣ್ಣ, ಸುನೀಲ್, ದೀಪು, ರಾಮಚಂದ್ರು ಹಾಗೂ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!