ಉದಯವಾಹಿನಿ, ಬಿಡದಿ (ರಾಮನಗರ): ಪಟ್ಟಣದ ನಲ್ಲಿಗುಡ್ಡೆ ಕೆರೆಯ ಗಾಣಕಲ್ ರಸ್ತೆಯಲ್ಲಿ ಇತ್ತೀಚೆಗೆ ನಡೆದಿದ್ದ ವಕೀಲ ವಿಜಯಕುಮಾರ್ ಅವರ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಿಡದಿ ಠಾಣೆ ಪೊಲೀಸರು ಭದ್ರಾಪುರ ಗ್ರಾಮದ ಚಂದ್ರಶೇಖರ್ ಅಲಿಯಾಸ್ ಮಾಟ, ಡಾರ್ಲಿಂಗ್ (27) ಹಾಗೂ ಬೆಂಗಳೂರಿನ ತಾವರೆಕೆರೆಯ ಸೋಮಶೇಖರ್ ಅಲಿಯಾಸ್ ಸೋಮನನ್ನು (21) ಬಂಧಿಸಿದ್ದಾರೆ.
ಆರೋಪಿಗಳಿಂದ 53 ಗ್ರಾಂ ಮಾಂಗಲ್ಯ ಸರ ಹಾಗೂ ಕೃತ್ಯಕ್ಕೆ ಬಳಸಿದ 3 ದ್ವಿಚಕ್ರ ವಾಹನಗಳು ಸೇರಿದಂತೆ ಒಟ್ಟು ₹6 ಲಕ್ಷ ಮೌಲ್ಯದ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಕಾಕರಾಮನಹಳ್ಳಿಯವರಾದ ವಿಜಯಕುಮಾರ್ ಅವರು ಜುಲೈ 20ರಂದು ಮಧ್ಯಾಹ್ನ 3.30ರ ಸುಮಾರಿಗೆ ಬೈಕ್‌ನಲ್ಲಿ ಊರಿಗೆ ಹೋಗುತ್ತಿದ್ದರು. ಇದೇ ಮಾರ್ಗದಲ್ಲಿ ಸ್ಕೂಟರ್‌ನಲ್ಲಿ ಬಂದಿದ್ದ ಆರೋಪಿಗಳಿಬ್ಬರು ವೇಗವಾಗಿ ಅಡ್ಡಾದಿಡ್ಡಿ ಹೋಗುತ್ತಿದ್ದಾಗ, ‘ನಿಧಾನವಾಗಿ ಹೋಗಿ’ ಎಂದು ವಿಜಯಕುಮಾರ್ ಬುದ್ಧಿಮಾತು ಹೇಳಿದ್ದರು. ಅದಕ್ಕೆ ಕೆರಳಿದ್ದ ಇಬ್ಬರೂ ಕೆಟ್ಟದಾಗಿ ನಿಂದಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.ಬೈಕ್ ತಡೆದು ವಿನಾ ಕಾರಣ ಜಗಳ ತೆಗೆದಿದ್ದ ಆರೋಪಿಗಳು ಮುಖಕ್ಕೆ ಪೆಪ್ಪರ್‌ ಸ್ಪ್ರೆ ಮಾಡಿ, ಡ್ರ್ಯಾಗರ್‌ನಿಂದ ಎದೆ ಮತ್ತು ಭುಜಕ್ಕೆ ಚುಚ್ಚಿ ಕೊಲೆಗೆ ಯತ್ನಿಸಿದ್ದರು. ಘಟನೆ ಕುರಿತು ವಕೀಲ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು, ವಿವಿಧೆಡೆ ತಲೆ ಮರೆಸಿಕೊಂಡಿದ್ದ ಆರೋಪಿಗಳನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.ಡ್ರೈವರ್ ಕೆಲಸ ಮಾಡಿಕೊಂಡಿರುವ ಆರೋಪಿ ಚಂದ್ರಶೇಖರ್ ಬಿಡದಿ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದಾನೆ. ಆತನ ವಿರುದ್ಧ ಬಿಡದಿ ಸೇರಿದಂತೆ ವಿವಿಧ ಠಾಣೆಗಳಲ್ಲಿ ಕೊಲೆ, ಕೊಲೆ ಯತ್ನ, ಸುಲಿಗೆ ಸೇರಿದಂತೆ ಸುಮಾರು 50 ಪ್ರಕರಣಗಳು ದಾಖಲಾಗಿವೆ. ಹತ್ತಕ್ಕೂ ಹೆಚ್ಚು ಠಾಣೆಗಳಲ್ಲಿ ಈತನ ವಿರುದ್ಧ ವಾರೆಂಟ್ ಬಾಕಿ ಇದೆ. ಅಪರಾಧವನ್ನೇ ವೃತ್ತಿ ಮಾಡಿಕೊಂಡಿರುವ ಆತನ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲು ಚಿಂತನೆ ನಡೆಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!