ಉದಯವಾಹಿನಿ, ಉಡುಪಿ: ಕೊರಗ ಸಮುದಾಯದವರಿಗೆ ಉದ್ಯೋಗ ದೊರಕಿಸಿಕೊಡಲು ಪ್ರಯತ್ನ ನಡೆಸುವುದಾಗಿ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಅವರು ಬುಧವಾರ ಭರವಸೆ ನೀಡಿದ ಕಾರಣ ಕಳೆದ ಹತ್ತು ದಿನಗಳಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ನಡೆದ ಅಹೋರಾತ್ರಿ ಧರಣಿ ತಾತ್ಕಾಲಿಕವಾಗಿ ಅಂತ್ಯಗೊಂಡಿತು.
ಸರ್ಕಾರಿ ಉದ್ಯೋಗ ಹಾಗೂ ಕೃಷಿ ಭೂಮಿ ಹಕ್ಕುಪತ್ರ ಮಂಜೂರಾತಿಗೆ ಆಗ್ರಹಿಸಿ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ- ಕೇರಳದ ನೇತೃತ್ವದಲ್ಲಿ ಧರಣಿ ಹಮ್ಮಿಕೊಳ್ಳಲಾಗಿತ್ತು.
ಧರಣಿ ಸ್ಥಳಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸಿ ಮಾತನಾಡಿದ ಖಾದರ್ ಅವರು, ಕೊರಗ ಸಮುದಾಯದವರಿಗೆ ನೇರ ನೇಮಕಾತಿ ಮೂಲಕ ಉದ್ಯೋಗ ನೀಡಲು ಕಾನೂನು ತಿದ್ದುಪಡಿ ಮಾಡಬೇಕಾಗುತ್ತದೆ. ಆದ್ದರಿಂದ ಹೊರಗುತ್ತಿಗೆ ಕೆಲಸ ಎಲ್ಲೆಲ್ಲಿ ಖಾಲಿ ಇದೆ ಎಂಬುದನ್ನು ನೋಡಿಕೊಂಡು, ಅವರಿಗೆ ಉದ್ಯೋಗ ದೊರಕಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಕೊರಗ ಸಮುದಾಯದವರ ಬೇಡಿಕೆಗಳ ಈಡೇರಿಕೆ ವಿಚಾರವಾಗಿ ಆಗಸ್ಟ್ 15ರ ಬಳಿಕ ಸಂಬಂಧಪಟ್ಟ ಅಧಿಕಾರಿಗಳ ಜೊತೆಗೆ ಉನ್ನತ ಮಟ್ಟದ ಚರ್ಚೆ ನಡೆಸಲಾಗುವುದು. ಈ ಚರ್ಚೆಗೆ ಒಕ್ಕೂಟದ ಪದಾಧಿಕಾರಿಗಳನ್ನೂ ಕರೆದೊಯ್ಯಲಾಗುವುದು ಎಂದು ಆಶ್ವಾಸನೆ ನೀಡಿದರು.
ಕೊರಗ ಸಮುದಾಯದವರ ಯಾವ ಬೇಡಿಕೆಗಳನ್ನು ಬಗೆಹರಿಸಬಹುದು, ಯಾವುದು ಸಾಧ್ಯವಿಲ್ಲ ಎಂಬುದರ ಬಗ್ಗೆಯೂ ಸ್ಪಷ್ಟವಾದ ನಿರ್ಧಾರವನ್ನು ಸಭೆಯಲ್ಲಿ ಕೈಗೊಳ್ಳಲಾಗುವುದು ಎಂದು ಪ್ರತಿಭಟನಾಕಾರರಿಗೆ ತಿಳಿಸಿದರು.
