ಉದಯವಾಹಿನಿ, ಉಡುಪಿ: ಜಿಲ್ಲೆಯಾದ್ಯಂತ ಭಾರಿ ಮಳೆ ಸುರಿದ ಪರಿಣಾಮ ಕೆಲವೆಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.
ಗುರುವಾರ ಅಲ್ಪಕಾಲ ಬಿಸಿಲಿನ ವಾತಾವರಣವಿತ್ತು. ಮಧ್ಯಾಹ್ನ 12 ಗಂಟೆಯ ಬಳಿಕ ಮತ್ತೆ ಧಾರಾಕಾರ ಮಳೆ ಸುರಿದಿದೆ.
ಘಟ್ಟ ಪ್ರದೇಶಗಳಲ್ಲಿ ಭಾರೀ ಮಳೆ ಸುರಿದಿರುವ ಕಾರಣ ಬ್ರಹ್ಮಾವರ ತಾಲ್ಲೂಕಿನ ಹಾವಂಜೆ, ಆರೂರು ಬೆಳ್ಮಾರು, ಹೇರೂರು, ನೀಲಾವರ, ಬಾವಲಿಕುಕುದ್ರು, ಉಪ್ಪೂರು ಪ್ರದೇಶಗಳಲ್ಲಿ ಮಡಿಸಾಲು ಮತ್ತು ಸೀತಾನದಿ ಉಕ್ಕಿ ಹರಿದು ಪ್ರವಾಹ ಕಾಣಿಸಿಕೊಂಡಿದೆ.
ಕಳೆದ ಒಂದು ವಾರದಿಂದ ನಿರಂತರವಾಗಿ ಪ್ರವಾಹ ಕಾಣಿಸಿಕೊಳ್ಳುತ್ತಿರುವುದರಿಂದ ನದೀ ತೀರದ ಭತ್ತದ ಗದ್ದೆಗಳಲ್ಲಿ ಬೆಳೆ ಕೊಳೆಯುವ ಭೀತಿ ಎದುರಾಗಿದೆ.ಆರೂರಿನ ಕೆಲವೆಡೆ ನದೀ ತೀರದ ಭತ್ತದ ಗದ್ದೆಗಳಲ್ಲಿ ಮರಳು ಶೇಖರಣೆಗೊಂಡು ಬೆಳೆ ನಾಶವಾಗಿದೆ.
