ಉದಯವಾಹಿನಿ, ರಾಮನಗರ: ಮುಡಾ, ಮಹರ್ಷಿ ವಾಲೀಕಿ ಹಗರಣವನ್ನು ಮುಂದಿಟ್ಟುಕೊಂಡು ಬಿಜೆಪಿ-ಜೆಡಿಎಸ್‌‍ ನಡೆಸುತ್ತಿರುವ ಪಾದಯಾತ್ರೆಗೆ ಪ್ರತಿಯಾಗಿ ಕಾಂಗ್ರೇಸ್ ರಾಮನಗರದಲ್ಲಿಂದು ಜನಾಂದೋಲನ ನಡೆಸಿದೆ.ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಬಿಜೆಪಿ ಅವಧಿಯಲ್ಲಿ ನಡೆದ ವಿವಿಧ ಹಗರಣಗಳ ಕುರಿತು ವಿವರಣೆ ನೀಡಿದರು. ಪ್ರತಿಯೊಂದು ಹಗರಣವನ್ನು ಬಿಜೆಪಿಯವರು ಸಿಬಿಐ ತನಿಖೆಗೆ ವಹಿಸುವಂತೆ ಆಗ್ರಹಿಸುತ್ತಾರೆ. ಗುರು ರಾಘವೇಂದ್ರ ಬ್ಯಾಂಕಿನ ಹಗರಣವನ್ನು ಸಿಬಿಐ ತನಿಖೆಗೆ ವಹಿಸಿದ್ದರೂ ಈವರೆಗೂ ತನಿಖಾಧಿಕಾರಿಯನ್ನು ನೇಮಿಸಿಲ್ಲ. ಮೊಟ್ಟೆ ಖರೀದಿ ಹಗರಣದಲ್ಲಿ ಬಿಜೆಪಿಯ ಸಚಿವರಾಗಿದ್ದ ಶಶಿಕಲಾ ಜೊಲ್ಲೆ ವಿರುದ್ಧ ಅಭಿಯೋಜನೆಗೆ ದೂರು ಸಲ್ಲಿಸಲಾಗಿದೆ. ಈವರೆಗೂ ಅನುಮತಿ ನೀಡಿಲ್ಲ ಎಂದು ಆರೋಪಿಸಿದರು.

ಬಿಜೆಪಿ-ಜೆಡಿಎಸ್‌‍ ಪಕ್ಷದವರು ಸುಳ್ಳು ಆರೋಪ ಮಾಡಿ ಪಾದಯಾತ್ರೆ ನಡೆಸುತ್ತಿದ್ದಾರೆ. ಇದು ಅವರ ಪಾಪದ ಪಾದಯಾತ್ರೆ. ಮೈಸೂರಿಗೆ ಬರಲಿ, ಕಾವೇರಿ ನದಿಯಲ್ಲಿ ಸ್ನಾನ ಮಾಡಿ ಹೋಗಲಿ ಎಂದು ಹೇಳಿದರು.ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್‌ ಮಾತನಾಡಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ವೇದಿಕೆಯಲ್ಲಿ ಕೂರಿಸಿಕೊಂಡು ಭ್ರಷ್ಟಾಚಾರದ ಬಗ್ಗೆ ಮಾತನಾಡುವುದು ಬಿಜೆಪಿ-ಜೆಡಿಎಸ್‌‍ನವರ ನೈತಿಕತೆಯನ್ನು ಪ್ರಶ್ನೆ ಮಾಡುವಂತಾಗಿದೆ. ಕುಮಾರಸ್ವಾಮಿ ಆರಂಭದಲ್ಲಿ ಚೆನ್ನಾಗಿ ಮಾತನಾಡುತ್ತಿದ್ದರು. ಇತ್ತೀಚೆಗೆ ಅವರ ಹೇಳಿಕೆಗಳು ತೀರಾ ಕೆಳಮಟ್ಟಕ್ಕಿಳಿದಿವೆ. ನಾವು ಅವರ ಹಂತಕ್ಕೆ ಇಳಿದು ಮಾತನಾಡುವುದು ಸರಿಯಲ್ಲ ಎಂದರು. ಮುಡಾ ಕುಮಾರಸ್ವಾಮಿ ಸೇರಿದಂತೆ 125 ಮಂದಿಗೆ ಬದಲಿ ನಿವೇಶನ ನೀಡಿದೆ. ಈ ನಿವೇಶನಗಳನ್ನು ಹಂಚಿರುವುದು ಬಿಜೆಪಿಯ ಅಧಿಕಾರಾವಧಿಯಲ್ಲಿ ಎಂದು ವಾಗ್ದಾಳಿ ನಡೆಸಿದರು.ಕಾಂಗ್ರೆಸ್‌‍ ವಿರುದ್ಧ ಕೇಂದ್ರ ಸರ್ಕಾರ ಸಿಬಿಐ, ಇ.ಡಿ., ಆದಾಯ ತೆರಿಗೆ ಅಧಿಕಾರಿಗಳ ದಾಳಿ ನಡೆಸುತ್ತಿದೆ. ಜನ ಇದನ್ನು ಅರ್ಥ ಮಾಡಿಕೊಂಡಿದ್ದಾರೆ ಎಂದರು.

 

Leave a Reply

Your email address will not be published. Required fields are marked *

error: Content is protected !!