ಉದಯವಾಹಿನಿ, ನರಗುಂದ: ಮಲಪ್ರಭಾ ನದಿಯಲ್ಲಿ ಪ್ರವಾಹ ಉಂಟಾಗಿ ತಾಲ್ಲೂಕಿನ ಲಕಮಾಪುರ, ವಾಸನ, ಬೆಳ್ಳೇರಿ, ಕೊಣ್ಣೂರು, ಬೂದಿಹಾಳ, ಕಲ್ಲಾಪೂರ, ಕಪ್ಪಲಿ ಹಾಗೂ ಶಿರೋಳ ಗ್ರಾಮಗಳು ಪ್ರವಾಹ ಪರಿಸ್ಥಿತಿಯನ್ನು ಎದುರಿಸುತ್ತಿವೆ.
ಲಕಮಾಪುರ ಗ್ರಾಮದ ಐದು ಮನೆಗಳಲ್ಲಿ ನೀರು ನಿಂತಿದೆ. ಅಲ್ಲಿನ ಜನರನ್ನು ಗ್ರಾಮದಲ್ಲಿ ತೆರೆಯಲಾದ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.
ನವಿಲುತೀರ್ಥ ಜಲಾಶಯ ಭರ್ತಿಗೆ ಕೇವಲ ಎರಡು ಅಡಿ ಬಾಕಿ ಇದೆ. ಇನ್ನು 3 ಟಿಎಂಸಿ ಅಡಿ ನೀರು ಬಂದರೆ ಜಲಾಶಯ ಸಂಪೂರ್ಣ ಭರ್ತಿಯಾಗಲಿದೆ. ಒಳ ಹರಿವು 20 ಸಾವಿರ ಕ್ಯುಸೆಕ್ ಇದ್ದು, ನಿತ್ಯ 15 ಸಾವಿರ ಕ್ಯುಸೆಕ್‌ಗೂ ಹೆಚ್ಚು ನೀರನ್ನು ಹೊರಬಿಡಲಾಗುತ್ತಿದೆ. ಪ್ರವಾಹಕ್ಕೆ ಬೆಳೆಗಳು ಮುಳುಗಡೆಯಾಗಿವೆ.
ಮಲಪ್ರಭಾ ನದಿಪಾತ್ರದ ಜಮೀನಿನಲ್ಲಿ ಗೋವಿನಜೋಳ, ಹತ್ತಿ, ಸೂರ್ಯಕಾಂತಿ, ಹೆಸರು, ಉಳ್ಳಾಗಡ್ಡೆ, ಮೆಣಸಿನಕಾಯಿ, ಕಬ್ಬು, ಪೇರಲ ಪ್ರವಾಹಕ್ಕೆ ತುತ್ತಾಗಿವೆ. ಹೆಸರು ಬೆಳೆ ಕಟಾವು ಹಂತಕ್ಕೆ ಬಂದಿತ್ತು. ಮೂಲಂಗಿ, ಮೆಂತೆ, ಟೊಮೆಟೊ, ಬದನೆಕಾಯಿ, ಬೆಂಡೆಕಾಯಿ, ಕೊತ್ತಂಬರಿ ಸೇರಿದಂತೆ ಅನೇಕ ಬೆಳೆಗಳು ಪ್ರವಾಹದಲ್ಲಿ ಮುಳುಗಿವೆ.
ತಹಶೀಲ್ದಾರ್ ಭೇಟಿ: ಗದಗ ಜಿಲ್ಲಾ ಉಪವಿಭಾಗಾಧಿಕಾರಿ ಗಂಗಪ್ಪ, ತಹಶೀಲ್ದಾರ್ ಶ್ರೀಶೈಲ ತಳವಾರ, ತಾಲ್ಲೂಕು ಪಂಚಾಯ್ತಿ ಇಒ ಎಸ್.ಕೆ. ಇನಾಮದಾರ, ಕಂದಾಯ ನಿರೀಕ್ಷಕ ಐ.ವೈ. ಕಳಸನ್ನವರ, ಟಿ.ಆರ್. ಪಾಟೀಲ, ಎಂ.ಎಚ್. ಮಲಘಾಣ, ಎಂ.ಎ.ವಾಲಿ, ಮಂಜುನಾಥ ಗಣಿ, ಕೃಷಿ ಅಧಿಕಾರಿಗಳು ಪ್ರವಾಹ ಪರಿಸ್ಥಿತಿ ಪರಿಶೀಲಿಸಿದರು.

Leave a Reply

Your email address will not be published. Required fields are marked *

error: Content is protected !!