ಉದಯವಾಹಿನಿ, ಬೆಂಗಳೂರು: ಪಶ್ಚಿಮ ಘಟ್ಟ ಪ್ರದೇಶದಲ್ಲಿ 2015ರ ನಂತರ ಆಗಿರುವ ಎಲ್ಲಾ ಅರಣ್ಯ ಒತ್ತುವರಿಗಳನ್ನು ತೆರೆವುಗೊಳಿಸುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದ್ದಾರೆ.ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಸಚಿವರು ಸೂಚನೆ ನೀಡಿದ್ದು, ಶಿವಮೊಗ್ಗ, ಚಿಕ್ಕಮಗಳೂರು, ಮೈಸೂರು, ಚಾಮರಾಜನಗರ, ಉತ್ತರ ಕನ್ನಡ, ಬೆಳಗಾವಿ, ಕೊಡಗು, ದಕ್ಷಿಣ ಕನ್ನಡ, ಉಡುಪಿ, ಹಾಸನ ಸೇರಿದಂತೆ ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿ 2015ರ ನಂತರದ ಎಲ್ಲಾ ಅರಣ್ಯ ಒತ್ತುವರಿ ತೆರವುಗೊಳಿಸುವಂತೆ ತಿಳಿಸಿದ್ದಾರೆ.

ಪಶ್ಚಿಮ ಘಟ್ಟದ ಎಲ್ಲಾ ಗಿರಿ ಪ್ರದೇಶಗಳಲ್ಲಿ ಅನಧಿಕೃತವಾಗಿ ಅರಣ್ಯ ಪ್ರದೇಶ ಒತ್ತುವರಿ ಮಾಡಿ ನಿರ್ಮಿಸಿದ ತೋಟ, ಬಡಾವಣೆ, ರೆಸಾರ್ಟ್ ಗಳ ವಿರುದ್ಧ ಕ್ರಮ ಕೈಗೊಂಡು ತಕ್ಷಣ ತೆರವುಗೊಳಿಸಬೇಕು. ತಿಂಗಳ ಒಳಗೆ ವರದಿ ಸಲ್ಲಿಸಬೇಕು ಎಂದು ತಿಳಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿರೂರು ಗುಡ್ಡ ಕುಸಿತದಲ್ಲಿ 11 ಜೀವಗಳು ಬಲಿಯಾಗಿವೆ. ಕೇರಳದಲ್ಲಿ ಗುಡ್ಡ ಕುಸಿತದಲ್ಲಿ 250 ಕ್ಕೂ ಹೆಚ್ಚು ಜನ ಮೃತಪಟ್ಟಿದ್ದು, 200 ಕ್ಕೂ ಅಧಿಕ ಜನ ಕಣ್ಮರೆಯಾಗಿದ್ದಾರೆ. ಈ ದುರಂತ ಎಚ್ಚರಿಕೆ ಗಂಟೆಯಾಗಿದ್ದು, ಪಶ್ಚಿಮ ಘಟ್ಟದ ಉಳಿವು ಹಿಂದಿಗಿಂತಲೂ ಇಂದು ಹೆಚ್ಚಾಗಿದೆ. ಪಶ್ಚಿಮ ಘಟ್ಟದ ಗುಡ್ಡಗಳು ಮತ್ತು ಶೋಲಾ ಅರಣ್ಯಗಳನ್ನು ಕಡಿದು ತೋಟ, ಮನೆ, ಹೋಂ ಸ್ಟೇ, ರೆಸಾರ್ಟ್ ಮಾಡುವುದರಿಂದ, ಬೇರಿನಿಂದ ಗಟ್ಟಿಯಾಗಿ ಮಣ್ಣು ಹಿಡಿದಿರುವ ಬೃಹತ್ ಮರಗಳ ಕಡಿತಲೆ, ಗುಡ್ಡ ಕತ್ತರಿಸಿ ರಸ್ತೆ ನಿರ್ಮಿಸುವುದರಿಂದ ದುರಂತ ನಡೆಯುತ್ತಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಸಚಿವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!