ಉದಯವಾಹಿನಿ, ಕೆಜಿಎಫ್ : ಸಪ್ತಪದಿ ತುಳಿದ ಕೆಲವೇ ಗಂಟೆಗಳಲ್ಲಿ ನವಜೋಡಿ ಮಾರಕಾಸಗಳಿಂದ ಹೊಡೆದಾಡಿಕೊಂಡು ಇಬ್ಬರೂ ಮೃತಪಟ್ಟಿರುವ ಘಟನೆಯೊಂದು ಅಂಡರ್‍ಸನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪರಸ್ಪರ ಎರಡೂ ಮನೆಯವರನ್ನು ಒಪ್ಪಿಸಿ ಮದುವೆಯಾಗಿದ್ದ ಈ ಜೋಡಿ ಕೋಲಾರ ಜಿಲ್ಲೆ ಕೆಜಿಎಫ್ ತಾಲ್ಲೂಕಿನ ಚಂಬರಸನಹಳ್ಳಿಯಲ್ಲಿ ದುರಂತ ಅಂತ್ಯ ಕಂಡಿರುವುದು ಗ್ರಾಮವನ್ನು ಬೆಚ್ಚಿ ಬೀಳಿಸಿದೆ.
ಆಂಧ್ರದ ರಾಯಸಂದ್ರದಲ್ಲಿ ಬಟ್ಟೆ ಅಂಗಡಿ ಇಟ್ಟುಕೊಂಡಿದ್ದ, ಆಂಧ್ರಪ್ರದೇಶದ ಶಾಂತಿಪುರಂ ನಿವಾಸಿ ನವೀನ್ ಕುಮಾರ್(30) ಹಾಗೂ ಕೆಜಿಎಫ್ ನ ಬೈನೇಹಳ್ಳಿಯ ನಿವಾಸಿ ನಿಖಿತಾಶ್ರೀ(18) ಹೊಡೆದಾಡಿಕೊಂಡು ಮೃತಪಟ್ಟವರು. ನಿಖಿತಾಶ್ರೀ ಮನೆಯಲ್ಲಿ ಆಕೆಗೆ ಮದುವೆ ಮಾಡಲು ಪೋಷಕರು ಬ್ರೋಕರ್‍ಗೆ ಹುಡುಗನನ್ನು ತೋರಿಸಲು ಹೇಳಿದ್ದರು. ಅದರಂತೆ ಬ್ರೋಕರ್ ಮೂರು ತಿಂಗಳ ಹಿಂದೆ ನವೀನ್ ಕುಮಾರ್‍ನನ್ನು ಪರಿಚಯಿಸಿ ಮನೆಗೆ ಕರೆಸಿಕೊಂಡು ಮದುವೆ ಮಾತುಕತೆ ನಡೆಸಿದ್ದರು. ಆ ಸಂದರ್ಭದಲ್ಲಿ ನವೀನ್ ಏನನ್ನು ಮಾತನಾಡದೇ ಮೌನವಾಗಿದ್ದ. ಆತನ ಮನೆಯವರಿಂದಲೂ ಮದುವೆಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಒಂದೂವರೆ ತಿಂಗಳ ಹಿಂದೆ ಈ ಮದುವೆ ಬೇಡ ಎಂದಿದ್ದರು. KGF ನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ನಿಖಿತಾಶ್ರೀ ಜೊತೆ ಮಾತನಾಡುವ ಸಲುವಾಗಿ ನವೀನ್ ಕುಮಾರ್ ಕಾಲೇಜು ಬಳಿ ಹೋಗಿ ಆಕೆಗೆ ಮೊಬೈಲ್ ಕೊಡಿಸಿದ್ದಾನೆ. ಅಂದಿನಿಂದ ಇವರಿಬ್ಬರು ಮೊಬೈಲ್‍ನಲ್ಲಿ ಮಾತುಕತೆ ನಡೆಸುತ್ತಿದ್ದರು.
ಹುಡುಗನ ಮನೆಯವರು ಏಕಾಏಕಿ ಮೂರು ದಿನಗಳ ಹಿಂದೆ ನಿಖಿತಾಶ್ರೀ ಮನೆಗೆ ಮದುವೆ ಮಾತುಕತೆ ನಡೆಸಿ ಸರಳವಾಗಿ ಚಂಬರಸನಹಳ್ಳಿಯ ನವೀನ್ ಕುಮಾರನ ಅಕ್ಕನ ಮನೆಯಲ್ಲಿ ಮದುವೆ ಮಾಡೋಣ ಎಂದು ನಿನ್ನೆಗೆ ದಿನಾಂಕ ಗೊತ್ತು ಮಾಡಿದ್ದರು. ಅದರಂತೆ ನಿನ್ನೆ ಬೆಳಗ್ಗೆ ನಿಖಿತಾಶ್ರೀ ಹಾಗೂ ನವೀನ್ ಕುಮಾರ್ ಮದುವೆ ನೆರವೇರಿದೆ. ನಂತರ ಗ್ರಾಮದಲ್ಲಿರುವ ವರನ ದೊಡ್ಡಪ್ಪನ ಮನೆಗೆ ವಧು-ವರನನ್ನು ಕರೆದುಕೊಂಡು ಹೋಗಿದ್ದಾರೆ. ಆ ಸಂದರ್ಭದಲ್ಲಿ ವಧು-ವರರಿಬ್ಬರೂ ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡು ಯಾವುದೋ ವಿಚಾರಕ್ಕೆ ಗಲಾಟೆ ಮಾಡಿಕೊಂಡಿದ್ದಾರೆ. ಆ ವೇಳೆ ನವೀನ್ ಕುಮಾರ್ ಕೈಗೆ ಸಿಕ್ಕಿದ ಮಚ್ಚಿನಿಂದ ನಿಖಿತಾಶ್ರೀ ಮನಬಂದಂತೆ ಹಲ್ಲೆ ನಡೆಸಿ ನಂತರ ಆತನು ಮಚ್ಚಿನಿಂದ ಹೊಡೆದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ.
