ಉದಯವಾಹಿನಿ , ಸೈದಾಪುರ: ಸಮೀಪದ ಮಲ್ಹಾರ ಗ್ರಾಮದ ಪರಿಶಿಷ್ಟ ಜಾತಿ ಓಣಿ ಸೇರಿ ಗ್ರಾಮದ ಬಹುತೇಕ ಚರಂಡಿಗಳಲ್ಲಿ ತ್ಯಾಜ್ಯ ತುಂಬಿಕೊಂಡಿದೆ. ರಸ್ತೆ ಸರಿಯಾಗಿಲ್ಲ, ಬೀದಿ ದೀಪಗಳ ವ್ಯವಸ್ಥೆ ಸಮರ್ಪಕವಾಗಿಲ್ಲ. ಗ್ರಾಮಸ್ಥರು ಸಮಸ್ಯೆಯಲ್ಲೇ ದಿನದೂಡುತ್ತಿದ್ದಾರೆ.
ಚರಂಡಿಗಳನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸದ ಪರಿಣಾಮ ಮಳೆ ನೀರು, ಮನೆ ಬಳಕೆ ನೀರು ರಸ್ತೆ ಮೇಲೆ ಹರಿದು ಕೆಸರು ಗದ್ದೆಯಂತಾಗಿವೆ.
ನಮಗೆ ಅಡ್ಡಾಡಲು ಸಾಧ್ಯವಾಗುತ್ತಿಲ್ಲ ಎಂದು ಪರಿಶಿಷ್ಟ ಜಾತಿ ಓಣಿ ನಿವಾಸಿಗಳ ಅಳಲು.
ಗ್ರಾಮಪಂಚಾಯಿತಿಯ ಐವರು ಸದಸ್ಯರಿದ್ದಾರೆ.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆಯ ಮನೆ ಇರುವ ಪ್ರದೇಶದಿಂದ ಶರಣಮ್ಮ ದೊಡ್ಡಮನಿ ಅವರ ಮನೆಯಿಂದ ಮಹಾದೇವಪ್ಪ ಮಡಿಕಲ್ ವರೆಗಿನ ಸುಮಾರು 1 ಕಿ.ಮೀ ರಸ್ತೆ ಸಂಪೂರ್ಣ ಹಾಳಾಗಿದೆ. ಇದೇ ರಸ್ತೆ ಬಳಿಚಕ್ರ, ನಾಗರಬಂಡಿ, ಮೈಲಾಪುರ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತದೆ.
ಸಾಂಕ್ರಾಮಿಕ ರೋಗಗಳ ಭೀತಿ: ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನವಾಗಿದ್ದರೂ ಹಲವು ಕಡೆ ಚರಂಡಿಗಳಲ್ಲಿ ಹೂಳು ತುಂಬಿದ್ದರಿಂದ ಕೊಳಚೆ ನೀರು ಸರಾಗವಾಗಿ ಹರಿಯುತ್ತಿಲ್ಲ. ಇದರಿಂದ ಸೊಳ್ಳೆಗಳ ಹಾವಳಿ ಹೆಚ್ಚಾಗಿದ್ದು ಸಾಂಕ್ರಾಮಿಕ ರೋಗಗಳು ಉಲ್ಬಣಗೊಳ್ಳುವ ಲಕ್ಷಣಗಳು ಹೆಚ್ಚಾಗಿವೆ. ದುರ್ವಾಸನೆಯೂ ಹೆಚ್ಚಾಗಿದೆ.
ಜೋರು ಮಳೆಯಾದಾಗಲಂತೂ ಚರಂಡಿ ನೀರು ರಸ್ತೆ ಮೇಲೆಯೇ ಹರಿಯುತ್ತದೆ. ಇದರಿಂದ ರಸ್ತೆಗಳು ಹಾಳಾಗಿ ತಗ್ಗು ಗುಂಡಿಗಳು ಬಿದ್ದಿವೆ. ಮಕ್ಕಳು, ವೃದ್ಧರು, ಮಹಿಳೆಯರು ಅಡ್ಡಾಡಲೂ ಭಯಪಡುವಂತ ಸ್ಥಿತಿ ಇದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
