ಉದಯವಾಹಿನಿ , ಹೊಸಪೇಟೆ : ಕರ್ನಾಟಕ ಕಲಾಭಿಮಾನಿ ಸಂಘದ ವತಿಯಿಂದ ಶನಿವಾರ ರಾತ್ರಿ ಇಲ್ಲಿ ನಿಡ್ಲೆಯ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಕಲಾವಿದರಿಂದ ನಡೆದ ‘ದಕ್ಷಾಧ್ವರ ಗಿರಿಜಾಕಲ್ಯಾಣ’ ಯಕ್ಷಗಾನ ಜನಮನ ಸೂರೆಗೊಂಡಿತು.
ಮೇಳದ ಮುಖ್ಯಸ್ಥರೂ ಆಗಿರುವ ನಿಡ್ಲೆ ಗೋವಿಂದ ಭಟ್‌ ಅವರು ಯಕ್ಷಗಾನದ ಪ್ರಮುಖ ಆಕರ್ಷಣೆಯಾಗಿದ್ದರು. 66ರ ಹರೆಯದಲ್ಲೂ ಅವರು ಉತ್ಸಾಹದಿಂದ ದಕ್ಷನ ಪಾತ್ರ ನಿರ್ವಹಿಸಿ ಪ್ರೇಕ್ಷಕರನ್ನು ರಂಜಿಸಿದರು.
ಸ್ವತಂತ್ರ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ನಡೆದ ಯಕ್ಷಗಾನ ಸಂಜೆ 7.15ಕ್ಕೆ ಆರಂಭವಾಗಿ ರಾತ್ರಿ 12.15ರವರೆಗೂ ಮುಂದುವರಿಯಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಕರುಣಾಕರ ಶೆಟ್ಟಿಗಾರ್‌ ಕಾಶಿಪಟ್ಣ ಮತ್ತು ಸುಧೀರ್ ಪಾಣಾಜೆ ತಮ್ಮ ಕಂಠ ಮಾಧುರ್ಯ ಪ್ರದರ್ಶಿಸಿದರು.ಚೆಂಡೆ, ಮದ್ದಳೆಯಲ್ಲಿ ಶ್ರೀಧರ್ ಪಡ್ರೆ, ಚಂದ್ರಶೇಖರ ಸರಪಾಡಿ ಮಿಂಚಿದರು.
ಹಾಸ್ಯದಲ್ಲಿ ಮವ್ವಾರು ಬಾಲಕೃಷ್ಣ ಮಣಿಯಾಣಿ, ಸ್ತ್ರೀವೇಷದಲ್ಲಿ ಮುರಳೀಧರ ಕನ್ನಡಿಕಟ್ಟೆ, ಶರತ್ ಶೆಟ್ಟಿ ತೀರ್ಥಹಳ್ಳಿ, ಬಣ್ಣದ ವೇಷದಲ್ಲಿ ಮುಖೇಶ್‌ ದೇವಧರ್ ನಿಡ್ಲೆ ರಂಜಿಸಿದರು.ಮುಮ್ಮೇಳದಲ್ಲಿ ನಿಡ್ಲೆ ಗೋವಿಂದ ಭಟ್‌ ಅವರಲ್ಲದೆ, ಗಣೇಶ್ ಚಂದ್ರಮಂಡಲ, ಪದ್ಮನಾಭ ಶೆಟ್ಟಿ ಕನ್ನಡಿಕಟ್ಟೆ, ಹರಿಶ್ಚಂದ್ರ ಆಚಾರ್ಯ ಚಾರ್ಮಾಡಿ, ಪ್ರಸಾದ್ ಸವಣೂರು, ಗೌತಮ್ ಶೆಟ್ಟಿ ಬೆಳ್ಳಾರೆ, ಅರಳ ಗಣೇಶ್ ಶೆಟ್ಟಿ, ನವೀನ್‌ ಮುಂಡಾಜೆ ಅಕ್ಷಯ್‌ ಭಟ್‌ ಮೂಡುಬಿದಿರೆ, ಸತೀಶ್ ನೀರ್ಕರೆ, ಅಕ್ಷಯ್ ಮಿಜಾರು ಇತರರು ಪಾಲ್ಗೊಂಡರು. ದಕ್ಷನ ಸಂಹಾರದಲ್ಲಿ ಒಂದು ಪ್ರಸಂಗ ಕೊನೆಗೊಂಡು, ಅದರ ಮುಂದುವರಿದ ಭಾಗವೆಂಬಂತೆ ಗಿರಿಜಾ ಕಲ್ಯಾಣ ಪ್ರಸಂಗ ನಡೆಯಿತು.

Leave a Reply

Your email address will not be published. Required fields are marked *

error: Content is protected !!