ಉದಯವಾಹಿನಿ, ಬೆಂಗಳೂರು: ವಿಶ್ವವಿಖ್ಯಾತ ಲಾಲ್ಬಾಗ್ನ ಸ್ವಾತಂತ್ರ್ಯೋತ್ಸವದ 216ನೇ ಫಲಪುಷ್ಪ ಪ್ರದರ್ಶನಕ್ಕೆ ನಾಳೆ ತೆರೆ ಬೀಳಲಿದೆ. ಆಗಸ್ಟ್ 8ರಿಂದ ಆರಂಭಗೊಂಡಿರುವ ಈ ಪ್ರದರ್ಶನ ನಾಳೆ ಮುಗಿಯಲಿದೆ.
ಕಳೆದ ಹತ್ತು ದಿನಗಳಿಂದ ಲಕ್ಷಾಂತರ ವೀಕ್ಷಕರು ಫಲಪುಷ್ಪ ಪ್ರದರ್ಶನಕ್ಕೆ ಭೇಟಿ ಕೊಟ್ಟಿದ್ದಾರೆ. ಮಕ್ಕಳಿಂದ ವೃದ್ಧರವರೆಗೂ ಭೇಟಿ ನೀಡಿ ಹೂವಿನ ಸೌಂದರ್ಯವನ್ನು ಕಣ್ಣು ತುಂಬಿಕೊಂಡಿದ್ದಾರೆ. ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಸಹ ಭೇಟಿ ನೀಡಿದ್ದಾರೆ. ಅಲ್ಲದೆ, ದೇಶ, ವಿದೇಶಗಳ ಪ್ರವಾಸಿಗರು ಭೇಟಿ ನೀಡಿ ವೀಕ್ಷಿಸಿದ್ದಾರೆ.
ರಜಾ ದಿನಗಳಲ್ಲಿ ಲಾಲ್ಬಾಗ್ಗೆ ವೀಕ್ಷಕರ ಮಹಾಪೂರವೇ ಹರಿದು ಬಂದಿದೆ. ಇಂದು ಭಾನುವಾರವಾಗಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಕರು ಆಗಮಿಸಿದ್ದರು. ಪ್ರತಿ ವರ್ಷ ಒಂದೊಂದು ವಿಶೇಷತೆಗಳೊಂದಿಗೆ ಫಲಪುಷ್ಪ ಪ್ರದರ್ಶನವನ್ನು ತೋಟಗಾರಿಕೆ ಇಲಾಖೆ ಲಾಲ್ಬಾಗಿನ ಗಾಜಿನ ಮನೆಯಲ್ಲಿ ಹಮಿಕೊಳ್ಳುತ್ತದೆ. ಈ ಬಾರಿ ವಿಶ್ವಜ್ಞಾನಿ, ಸಂವಿಧಾನ ಶಿಲ್ಪಿ ಭಾರತರತ್ನ ಡಾ.ಬಿ.ಆರ್. ಅಂಬೇಡ್ಕರ್ ವಿಷಯಾಧರಿತ ಫಲಪುಷ್ಪ ಪ್ರದರ್ಶನ ಹಮಿಕೊಳ್ಳಲಾಗಿತ್ತು. ಹೂವಿನಿಂದ ನಿರ್ಮಿಸಲಾಗಿದ್ದ ಹಳೆಯ ಸಂಸತ್ ಭವನದ ಮಾದರಿ, ಅಂಬೇಡ್ಕರ್ ವಿಷಯಾಧರಿತ ಮಾದರಿಗಳು ನೋಡುಗರ ಮನೆ ಸೂರೆಗೊಂಡವು. ಅಲ್ಲದೆ, ಸಿಂಬಿಡಿಯಂ, ಆರ್ಕಿಡ್, ಬ್ರೋಮಿಲಿಯಾಸ್ ಮತ್ತು ಆಂಥೋರಿಯಂ ಹೂವುಗಳ ಪಿರಮಿಡ್, ಹಳೆ ಸಂಸತ್ ಭವನದ ಮೇಲೆ ರಾಷ್ಟ್ರ ಲಾಂಛನ, ಕಬ್ಬನ್ ಪಾರ್ಕ್ ಪಿರಮಿಡ್, ವಿವಿಧ ಸಂಸ್ಥೆಗಳಿಂದ ಹೂ ಕುಂಡಗಳ ಪ್ರದರ್ಶನ, ಭಗವಾನ್ ಬುದ್ಧ, ಹಳದಿ ಸೇವಂತಿಗೆ ಪಿರಮಿಡ್, ಬಿಗೋನಿಯಾ ಹೂವುಗಳ ಪಿರಮಿಡ್ ವಿಶೇಷ ಆಕರ್ಷಣೆಯಾಗಿದ್ದವು.
