ಉದಯವಾಹಿನಿ, ಬೆಂಗಳೂರು: ರಾಜ್ಯಾದ್ಯಂತ ಹಗುರದಿಂದ ಸಾಧಾರಣ ಮಳೆಯಾಗಿದ್ದು, ಕೆಲವೆಡೆ ವ್ಯಾಪಕ ಪ್ರಮಾಣದ ಮಳೆ ಬಿದ್ದಿದೆ.
ತುಮಕೂರು, ರಾಯಚೂರು ಜಿಲ್ಲೆಗಳ ಕೆಲವೆಡೆ ಭಾರಿ ಮಳೆಯಾಗಿದೆ. ರಾಯಚೂರು ಜಿಲ್ಲೆಯ ಗಾಣದಾನದಲ್ಲಿ 181 ಮಿಲಿ ಮೀಟರ್ ಅತ್ಯಧಿಕ ಪ್ರಮಾಣದ ಮಳೆ ಬಿದ್ದಿರುವುದು ದಾಖಲಾಗಿದೆ.
ರಾಜಧಾನಿ ಬೆಂಗಳೂರಿನ ಯಲಹಂಕದ ಕೊಡಿಗೇಹಳ್ಳಿಯಲ್ಲಿ 30 ಮಿ.ಮೀ. ನಷ್ಟು ಮಳೆಯಾಗಿದೆ. ರಾಜ್ಯದಲ್ಲಿ ಮಳೆ ಪ್ರಮಾಣ ಇಳಿಕೆಯಾಗಿದ್ದು, ಜಲಾಶಯಗಳ ಒಳಹರಿವು ಕೂಡ ಗಣನೀಯವಾಗಿ ಕುಸಿದಿದೆ. ಜಲವಿದ್ಯುತ್ ಉತ್ಪಾದಿಸುವ ಲಿಂಗನಮಕ್ಕಿ, ಸೂಪಾ, ವರಾಹಿ ಜಲಾಶಯಗಳ ವ್ಯಾಪ್ತಿಯಲ್ಲಿ ಒಳಹರಿವು ಕೇವಲ 12 ಸಾವಿರ ಕ್ಯೂಸೆಕ್ಸ್‍ಗೆ ಇಳಿಕೆಯಾಗಿದೆ. ಕಾವೇರಿ ಕೊಳ್ಳದ 4 ಜಲಾಶಯಗಳಲ್ಲಿ 18 ಸಾವಿರ ಕ್ಯೂಸೆಕ್ಸ್‍ಗೆ ಇಳಿಕೆಯಾಗಿದೆ. ಕೃಷ್ಣ ಕೊಳ್ಳದ ಜಲಾಶಯಗಳಲ್ಲೂ ಗಣನೀಯವಾಗಿ ಒಳಹರಿವು ಇಳಿಕೆಯಾಗಿದ್ದು, ಒಟ್ಟಾರೆ 68 ಸಾವಿರದಷ್ಟು ಮಾತ್ರ ಒಳಹರಿವಿದೆ. ತುಂಗಭದ್ರಾ ಜಲಾಶಯಕ್ಕೂ ಒಳಹರಿವಿನ ಪ್ರಮಾಣ ಇಳಿಕೆಯಾಗಿದ್ದು, ಇಂದು 31 ಸಾವಿರ ಕ್ಯೂಸೆಕ್ಸ್‍ನಷ್ಟು ಒಳಹರಿವಿದ್ದು, 10 ಸಾವಿರ ಕ್ಯೂಸೆಕ್ಸ್‍ನಷ್ಟು ಹೊರಹರಿಯುವಿಕೆ, 105.79 ಟಿಎಂಸಿ ಸಾಮಥ್ರ್ಯದ ಈ ಜಲಾಶಯದಲ್ಲಿ ಪ್ರಸ್ತುತ 76.91 ಟಿಎಂಸಿ ಅಡಿಯಷ್ಟು ನೀರಿದ್ದು, ಶೇ.73 ರಷ್ಟು ಮಾತ್ರ ಸಂಗ್ರಹವಾಗಿದೆ.
ಹವಾಮುನ್ಸೂಚನೆ ಪ್ರಕಾರ, ನಾಳೆಯಿಂದ ರಾಜ್ಯದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಲಿದೆ. ಆದರೂ ಚದುರಿದಂತೆ ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಇಂದು ಸಾಧಾರಣ ಮಳೆಯಾಗಲಿದ್ದು, ಕರಾವಳಿ ಮತ್ತು ಮಲೆನಾಡು ಭಾಗದ ಜಿಲ್ಲೆಗಳಲ್ಲಿ ಚದುರಿದಂತೆ ಸಾಧಾರಣ ಪ್ರಮಾಣದ ವ್ಯಾಪಕ ಮಳೆಯಾಗಲಿದೆ. ಕೆಲವೆಡೆ ಭಾರಿ ಮಳೆಯಾಗುವ ಸಾಧ್ಯತೆಗಳಿವೆ.
ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಆ.24 ರವರೆಗೂ ಸಾಧಾರಣ ಮಳೆ ಮುಂದುವರೆಯಲಿದ್ದು, ಆನಂತರ ಮಳೆಯ ತೀವ್ರತೆ ಕಡಿಮೆಯಾಗುವ ಮುನ್ಸೂಚನೆಗಳಿವೆ. ಜುಲೈನಲ್ಲಿ ಕರಾವಳಿ ಹಾಗೂ ಮಲೆನಾಡು ಸೇರಿದಂತೆ ಭಾರಿ ಮಳೆಯಾಗಿ ಅತಿವೃಷ್ಟಿ ಪ್ರವಾಹ ಉಂಟಾಗಿ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಆಗಸ್ಟ್‍ನಲ್ಲಿ ಮಳೆ ಪ್ರಮಾಣ ದಿನದಿಂದ ದಿನಕ್ಕೆ ಇಳಿಕೆಯಾಗಿದ್ದು, ಕರಾವಳಿ, ಮಲೆನಾಡು ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ದಕ್ಷಿಣ ಒಳನಾಡಿನಲ್ಲಿ ವಾಡಿಕೆ ಪ್ರಮಾಣದ ಮಳೆಯಾಗಿದ್ದರೂ ಕೆಲವೆಡೆ ಮಳೆ ಕೊರತೆ ಉಂಟಾಗಿದೆ. ಜುಲೈನಲ್ಲಿ ಬಿದ್ದಂತೆ ಆಗಸ್ಟ್‍ನಲ್ಲಿ ರಾಜ್ಯದೆಲ್ಲೆಡೆ ವ್ಯಾಪಕ ಪ್ರಮಾಣದ ಮಳೆಯಾಗಿಲ್ಲ. ಒಂದೆಡೆ ಹೆಚ್ಚು ಮಳೆಯಾಗಿದ್ದರೆ, ಮತ್ತೊಂದೆಡೆ ಮಳೆಯ ಅಭಾವವಿರುವುದು ಕಂಡುಬಂದಿದೆ.

Leave a Reply

Your email address will not be published. Required fields are marked *

error: Content is protected !!