ಉದಯವಾಹಿನಿ, ಬೆಂಗಳೂರು: ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಕೇಳಿಬಂದ ಆರೋಪಗಳ ವಿರುದ್ಧ ತನಿಖೆ ನಡೆಸಲು ರಾಜ್ಯಪಾಲರು ಪ್ರಾಸಿಕ್ಯೂಷನ್‍ಗೆ ಅನುಮತಿ ನೀಡಿರುವ ಬೆನ್ನಲ್ಲೇ ಇದೀಗ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿಗೆ ದೊಡ್ಡ ಗಂಡಾಂತರ ಎದುರಾಗಿದೆ. ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ಕಾನೂನು ಬಾಹಿರವಾಗಿ ಸಾಯಿ ವೆಂಕಟೇಶ್ವರ ಮಿನರಲ್ಸ್ ಎಂಬ ಅಸ್ತಿತ್ವದಲ್ಲೇ ಇಲ್ಲದ ಕಂಪನಿಗೆ ಗಣಿಗಾರಿಕೆ ನಡೆಸಲು ನಿಯಮ ಮೀರಿ ಜಮೀನು ನೀಡಿದ್ದರ ಆರೋಪ ಎದುರಿಸುತ್ತಿದ್ದಾರೆ. ಇದೀಗ ತನಿಖೆಯನ್ನು ಪೂರ್ಣಗೊಳಿಸಿರುವ ಲೋಕಾಯುಕ್ತ ವಿಶೇಷ ತನಿಖಾ ತಂಡ(ಎಸ್‍ಐಟಿ) ಕುಮಾರಸ್ವಾಮಿ ವಿರುದ್ದ ದೋಷಾರೋಪ ಪಟ್ಟಿ(ಚಾರ್ಜ್‍ಶೀಟ್) ಸಲ್ಲಿಸಲು ರಾಜ್ಯಪಾಲರಿಗೆ ಪ್ರಸ್ತಾವನೆ ಸಲ್ಲಿಸಿದೆ.
ಈ ಹಿಂದೆ ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್ ನಡೆಸಲು ರಾಜ್ಯಪಾಲರಿಗೆ ಕೋರಿದ್ದ ಪ್ರಸ್ತಾವನೆಗೆ ರಾಜ್ಯಪಾಲ ಥಾವರ್‍ಚಂದ್ ಗೆಹ್ಲೋಟ್ ಅನುಮತಿ ನೀಡಿಲ್ಲ ಎಂಬ ಆರೋಪ ಎದುರಾಗಿತ್ತು. ಇದೀಗ ಎಸ್‍ಐಟಿ ಎಚ್‍ಡಿಕೆ ವಿರುದ್ದ ಚಾಜ್‍ಶೀಟ್ ಸಲ್ಲಿಸಲು ರಾಜ್ಯಪಾಲರ ಸಮ್ಮತಿ ಕೋರಿ ದಾಖಲೆಗಳ ಸಮೇತ ಪತ್ರ ಬರೆದಿರುವುದು ಹೊಸ ಬೆಳವಣಿಗೆಯಾಗಿದೆ.
ಏನಿದು ಪ್ರಕರಣ?: ಎಚ್.ಡಿ.ಕುಮಾರಸ್ವಾಮಿಯವರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ, 1988ರಡಿ ಕಾನೂನು ಕ್ರಮಕ್ಕಾಗಿ, ಕರ್ನಾಟಕ ಲೋಕಾಯುಕ್ತದ ವಿಶೇಷ ತನಿಖಾ ತಂಡದ (ಎಸ್‍ಐಟಿ) ಎಡಿಜಿಪಿ ಚಂದ್ರಶೇಖರ್ ಖುದ್ದಾಗಿ ಪತ್ರವನ್ನು ರಾಜ್ಯಪಾಲರಿಗೆ ಬರೆದು ಅನುಮತಿ ನೀಡಲು ಕೋರಿದ್ದಾರೆ. ಕಳೆದ 2023, ನವೆಂಬರ್ 21ರಂದು ಅನುಮತಿ ಕೇಳಿತ್ತು. ಆದರೆ ರಾಜ್ಯಪಾಲರಿಂದ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಅಕ್ರಮ ಗಣಿಕಾರಿಗೆ ಸಂಬಂ„ಸಿದ ಘಟನೆ ಇದಾಗಿದ್ದು, ಕುಮಾರಸ್ವಾಮಿಯವರು ಈಗ ಪ್ರಧಾನಿ ನರೇಂದ್ರಮೋದಿ ನೇತೃತ್ವದ ಎನ್‍ಡಿಎ ಸರಕಾರದಲ್ಲಿ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವರಾಗಿದ್ದಾರೆ.
ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್ ಎಂಬ ಅಸ್ತಿತ್ವದಲ್ಲಿಲ್ಲದ ಸಂಸ್ಥೆಗೆ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ 6.10.2007ರಂದು ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಭಾವಿಹಳ್ಳಿ, ತಿಮ್ಮಪ್ಪಗುಡಿಯಲ್ಲಿ 550 ಎಕರೆ ಜಾಗವನ್ನು ಗಣಿಗಾರಿಕೆಗೆ ಅಕ್ರಮವಾಗಿ ಗುತ್ತಿಗೆಗೆ ನೀಡಿದ ಆರೋಪವಿದೆ. ಗುತ್ತಿಗೆ ನೀಡುವಾಗ ಮಿನರಲ್ಸ್ ಕನ್ಸಿಷನ್ ನಿಯಮಗಳ, ನಿಯಮ 59(2)ನ್ನು ಉಲ್ಲಂಸಿ ಮಂಜೂರು ಮಾಡಿದ್ದರು.
