ಉದಯವಾಹಿನಿ, ಮೈಸೂರು: ಈಗಿನ ಕಾಲಮಾನಕ್ಕೆ ತಕ್ಕಂತೆ ದೇಶದ ಆಡಳಿತ ವ್ಯವಸ್ಥೆಯ ಪರಿಕಲ್ಪನೆ ಬದಲಾವಣೆಯಾದಾಗ ಮಾತ್ರ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಜಯದೇವ ಹೈದ್ರೋಗ ಸಂಸ್ಥೆ ವಿಶ್ರಾಂತ ನಿರ್ದೇಶಕ ಹಾಗೂ ಸಂಸದರೂ ಆಗಿರುವ ಡಾ.ಸಿ.ಎನ್.ಮಂಜುನಾಥ್ ಅಭಿಪ್ರಾಯಪಟ್ಟರು.
ನಗರದ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಮೈವಿವಿಯ ಜೆನೆಟಿಕ್ಸ್ ಮತ್ತು ಜಿನೋಮಿಕ್ಸ್ ಅಧ್ಯಯನ ವಿಭಾಗದಿಂದ ಸೋಮವಾರ ಆಯೋಜಿಸಿದ್ದ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅತ್ಯುತ್ತಮ ಕಟ್ಟಡಗಳು, ಉಪಕರಣಗಳು, ಯಂತ್ರಗಳನ್ನು ಅನುಷ್ಠಾನ ಮಾಡಿದ ತಕ್ಷಣ ಸಮಾಜಕ್ಕೆ ಉತ್ತಮ ಸೇವೆಗಳನ್ನು ನೀಡಲು ಆಗುವುದಿಲ್ಲ. ಬದಲಾಗಿ ಅಗತ್ಯಕ್ಕೆ ತಕ್ಕಂತೆ ಮಾನವ ಸಂಪನ್ಮೂಲ ಸೃಜನೆ ಮಾಡಬೇಕು. ಆಗ ಎಲ್ಲರಿಗೂ ಸಮರ್ಪಕ ಸೇವೆ ದೊರೆಯುತ್ತದೆ. ಸಾವಿರ ಕೋಟಿ ರೂ ಖರ್ಚು ಮಾಡಿ ಕಟ್ಟಡ ನಿರ್ಮಾಣ ಮಾಡುತ್ತಾರೆ. 200 ಕೋಟಿ ವೆಚ್ಚ ಮಾಡಿ ಮಾನವ ಸಂಪನ್ಮೂಲ ನೇಮಕಾತಿ ಮಾಡಿಕೊಳ್ಳಲು ಹಿಂದೆ-ಮುಂದೆ ನೋಡುತ್ತಾರೆ. ಆಸ್ಪತ್ರೆಗಳು ಬೃಹತ್ತಾಗಿ ಕಾಣುತ್ತವೆ, ಅಲ್ಲಿ ಸರ್ಜನ್ ಇಲ್ಲ, ವೈದ್ಯರು ಇಲ್ಲ, ಟೆಕ್ನಿಷಿಯನ್ ಇರುವುದಿಲ್ಲ. ಕಾಲೇಜುಗಳು ಕಟ್ಟಡಗಳು ಚನ್ನಾಗಿ ಇರುತ್ತವೆ. ಅಲ್ಲಿ ಸಮರ್ಪಕ ಬೋಧಕ ಸಿಬ್ಬಂದಿ ಇರುವುದಿಲ್ಲ.
ನಮ್ಮ ಆಡಳಿತ ವ್ಯವಸ್ಥೆಯೂ ದಾರಿ ತಪ್ಪುತ್ತಿರುವುದೇ ಇಲ್ಲಿ. ಕಟ್ಟಡಗಳ ನಿರ್ಮಾಣಕ್ಕೆ ಅನುಮೋದನೆ ಕೊಡುವ ಸಚಿವ ಸಂಪುಟ ನೇಮಕಾತಿ ವಿಷಯದಲ್ಲಿ ನಿರ್ಲಕ್ಷ್ಯ ಧೋರಣೆ ತಾಳುತ್ತದೆ. ಕ್ಯಾಬಿನೆಟ್ ನಿರ್ಧಾರವನ್ನು ಇಲಾಖೆಯ ವಿಷಯ ನಿರ್ವಾಹಕ (ಕೇಸ್ ವರ್ಕರ್) ಇದು ಸರಿಯಲ್ಲ ಎಂದು ಷರಾ ಬರೆಯುತ್ತಾನೆ. ಆದ್ದರಿಂದ ಆಡಳಿತ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆಗಳು ಆಗಬೇಕು. ಒಂದು ಕಟ್ಟಡ ನಿರ್ಮಾಣದ ಹೊತ್ತಿನಲ್ಲೇ ಅದಕ್ಕೆ ತಕ್ಕನಾದ ಹುದ್ದೆಗಳನ್ನು ಸೃಜನೆ ಮಾಡಿ, ನೇಮಕಾತಿ ಮಾಡಿಕೊಂಡು, ಸಮರ್ಪಕವಾಗಿ ನಿರ್ವಹಣೆ ಮಾಡುವಂತೆ ಆಗಬೇಕು ಎಂದರು. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಿಗೆ ಸರ್ಕಾರ ಅನುದಾನವನ್ನು ಹೆಚ್ಚಾಗಿ ಕೊಡಬೇಕು. ಪ್ರಸ್ತುತ ನಮ್ಮ ದೇಶದ ಜಿಡಿಪಿಯಲ್ಲಿ ಶೇ.2ರಷ್ಟನ್ನು ಮಾತ್ರ ಆರೋಗ್ಯ ಮತ್ತು ಶಿಕ್ಷಣಕ್ಕೆ ನೀಡಲಾಗುತ್ತಿದೆ. ಇದು ಬದಲಾವಣೆಯಾಗಬೇಕು. ಶೇ.5ರಷ್ಟನ್ನು ನೀಡಬೇಕು. ಆಗ ವ್ಯವಸ್ಥೆ ಉತ್ತಮವಾಗುತ್ತದೆ. ದೇಶದ ಅಭಿವೃದ್ಧಿಯೂ ಆಗುತ್ತದೆ. ಇದಲ್ಲದೇ ನಮ್ಮಲ್ಲಿ ಈಗಲೂ ಬ್ರಿಟೀಷರ ಕಾಲದ ಕಾಯ್ದೆಗಳು ಹಲವಾರು ಇಲಾಖೆಗಳಲ್ಲಿ ಹಾಗೇ ಮುಂದುವರೆದುಕೊಂಡು ಬಂದಿವೆ. ಕಾಲದ ಬದಲಾವಣೆಗೆ ಪೂರಕವಾಗಿ ಕಾಯ್ದೆಗಳನ್ನು ಮಾರ್ಪಾಡು ಮಾಡಬೇಕು ಎಂದರು.
