ಉದಯವಾಹಿನಿ, ಚಿಕ್ಕಮಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ನಗರ ಘಟಕದಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು. ಬಿಜೆಪಿ ಕಚೇರಿಯಿಂದ ಆಜಾದ್ ವೃತ್ತದ ಮೆರವಣಿಗೆ ನಡೆಸಿದ ಕಾರ್ಯಕರ್ತರು ಮತ್ತು ಮುಖಂಡರು, ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಆರ್.ದೇವರಾಜ್‌ ಶೆಟ್ಟಿ ಮಾತನಾಡಿ, ‘ಸಮಾಜವಾದಿ ಎಂದು ಬಿಂಬಿಸಿಕೊಂಡಿರುವ ಸಿದ್ದರಾಮಯ್ಯ ಜನರ ಕಣ್ಣಿಗೆ ಮಂಕುಬೂದಿ ಎರಚಿದ್ದಾರೆ. ಅವರ ರಾಜಕೀಯ ನಾಟಕ ಈಗ ಬಯಲಾಗಿದೆ’ ಎಂದರು. ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ನೀಡಿ ತನಿಖೆ ಎದುರಿಸಬೇಕು. ಅದನ್ನು ಬಿಟ್ಟು ಬಂಡತನ ಪ್ರದರ್ಶನ ಮಾಡುವುದು ಸರಿಯಲ್ಲ ಎಂದು ಹೇಳಿದರು.
ಬಿಜೆಪಿ ನಗರ ಘಟಕ ಅಧ್ಯಕ್ಷ ಕೆ.ಎಸ್.ಪುಷ್ಪರಾಜ್ ಮಾತನಾಡಿ, ‘ಭ್ರಷ್ಟಚಾರ ಹಣೆಪಟ್ಟಿ ಹೊತ್ತಿರುವ ಮುಖ್ಯಮಂತ್ರಿಗಳು ಸ್ಥಾನ ಕಳೆದುಕೊಳ್ಳುವ ಮುನ್ನವೇ ಪದತ್ಯಾಗ ಗೊಳಿಸಿ ಸಂವಿಧಾನಕ್ಕೆ ಗೌರವ ಕೊಡಬೇಕು’ ಎಂದರು.ಜಿಲ್ಲಾ ವಕ್ತಾರ ಸಿ.ಎಚ್.ಲೋಕೇಶ್ ಮಾತನಾಡಿ, ‘ಅಹಿಂದ ನಾಯಾಕ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದಿರುವ ಸಿದ್ದರಾಮಯ್ಯ ಆ ಸಮುದಾಯಕ್ಕೆ ಮೀಸಲಾದ ಹಣವನ್ನೇ ಲೂಟಿ ಮಾಡಿಸಿದ್ದಾರೆ. ವಾಲ್ಮೀಕಿ ನಿಗಮದ ಹಣ ದುರುಪಯೋಗಕ್ಕೆ ಕಾರಣರಾಗಿದ್ದಾರೆ. ಆ ಮೂಲಕ ಆ ಸಮುದಾಯಗಳಿಗೆ ವಂಚನೆ ಮಾಡಿದ್ದಾರೆ’ ಎಂದು ಆರೋಪಿಸಿದರು.

ಮಹಿಳಾ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷೆ ಜಸಂತಾ ಅನಿಲ್‌ಕುಮಾರ್, ನಗರ ಘಟಕದ ಅಧ್ಯಕ್ಷೆ ಪವಿತ್ರಾ ಮಧುಗುಂಡಿ, ಜಿಲ್ಲಾ ಉಪಾಧ್ಯಕ್ಷ ಪ್ರೇಮ್‌ಕುಮಾರ್, ಎಸ್ಸಿ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಕುರುವಂಗಿ ವೆಂಕಟೇಶ್, ಒಬಿಸಿ ರಾಜ್ಯ ಕಾರ್ಯದರ್ಶಿ ಬಿ.ರಾಜಪ್ಪ, ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!