ಉದಯವಾಹಿನಿ, ರಾಮನಗರ: ಪ್ರವಾಸ ತಾಣಗಳ ಅಭಿವೃದ್ಧಿಗೆ ವಿಭಿನ್ನ ಹೆಜ್ಜೆ ಇಟ್ಟಿರುವ ಕೇಂದ್ರ ಪ್ರವಾಸೋದ್ಯಮ ಇಲಾಖೆಯು, ಪ್ರವಾಸಿಗರೇ ಮೆಚ್ಚುವ ತಾಣಗಳನ್ನು ಅಭಿವೃದ್ಧಿಪಡಿಸುವ ವಿಶೇಷ ಅಭಿಯಾನ ಕೈಗೊಂಡಿದೆ. ‘ದೇಖೋ ಅಪ್ನಾ ದೇಶ್ ಪೀಪಲ್ಸ್ ಚಾಯ್ಸ್ -2024’ ಹೆಸರಿನ ಈ ಅಭಿಯಾನದಲ್ಲಿ ಪ್ರವಾಸಿಗರು ತಮ್ಮ ನೆಚ್ಚಿನ ಪ್ರವಾಸಿ ಸ್ಥಳಗಳಿಗೆ ಆನ್‌ಲೈನ್ ವೋಟಿಂಗ್ ಮಾಡಿ ತಮ್ಮ ಅಭಿಪ್ರಾಯ ದಾಖಲಿಸಬಹುದಾಗಿದೆ.
ದೇಶದಾದ್ಯಂತ ಕೈಗೊಂಡಿರುವ ಈ ಅಭಿಯಾನದಡಿ, ಜಿಲ್ಲಾವಾರು ಪ್ರವಾಸ ತಾಣಗಳ ಅಭಿವೃದ್ಧಿಗೆ ಸಚಿವಾಲಯ ಮುಂದಾಗಿದೆ. ಆಗಸ್ಟ್ 7ರಿಂದ ಶುರುವಾಗಿರುವ ಅಭಿಯಾನವು ಸೆ. 15ರವರೆಗೆ ನಡೆಯಲಿದೆ. ಪ್ರವಾಸಿಗರು ತಾವು ಭೇಟಿ ಮಾಡಿದ ಹಾಗೂ ಮಾಡಲು ಇಚ್ಛಿಸುವ ತಮ್ಮ ಜಿಲ್ಲೆ ವ್ಯಾಪ್ತಿಯ ಸ್ಥಳಗಳ ಕುರಿತು ವೋಟಿಂಗ್ ಮಾಡಿ, ಅಲ್ಲಿ ಆಗಬೇಕಾದ ಸುಧಾರಣೆ ಕುರಿತು ಅಭಿಪ್ರಾಯ ನಮೂದಿಸಬೇಕು.
ಜಿಲ್ಲೆಯ 16 ಸ್ಥಳಗಳಿವೆ: ‘ರಾಜ್ಯ ಸರ್ಕಾರವು ರಾಮನಗರ ಜಿಲ್ಲೆಯಲ್ಲಿ 30 ಪ್ರವಾಸ ತಾಣಗಳನ್ನು ಗುರುತಿಸಿದೆ. ಪ್ರವಾಸೋದ್ಯಮ ಸಚಿವಾಲಯದ ಅಭಿಯಾನಕ್ಕೆ ಅಷ್ಟೂ ಸ್ಥಳಗಳ ಹೆಸರುಗಳನ್ನು ಕಳಿಸಲಾಗಿತ್ತು. ಅದರಲ್ಲಿ ಅಂತಿಮವಾಗಿ 16 ಸ್ಥಳಗಳನ್ನು ಸಚಿವಾಲಯವು ಅಭಿಯಾನಕ್ಕೆ ಆಯ್ಕೆ ಮಾಡಿದೆ’ ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ರವಿಕುಮಾರ್ ಎಚ್.ಡಿ. ‘ಪ್ರಜಾವಾಣಿ’ಗೆ ತಿಳಿಸಿದರು.
‘ಆಧ್ಯಾತ್ಮಿಕ, ಸಾಂಸ್ಕೃತಿಕ ಮತ್ತು ಪರಂಪರೆ, ಪ್ರಕೃತಿ ಮತ್ತು ವನ್ಯಜೀವಿ, ಸಾಹಸ ಹಾಗೂ ಇತರೆ ಸೇರಿದಂತೆ 5 ಬಗೆಯ ಪ್ರವಾಸ ತಾಣಗಳನ್ನು ಅಭಿಯಾನಕ್ಕೆ ಗುರುತಿಸಲಾಗಿದೆ. ಅಭಿಯಾನದಲ್ಲಿ ಭಾಗವಹಿಸುವವರು ಈ ಪೈಕಿ, ಕನಿಷ್ಠ 1ರಿಂದ 3 ತಾಣಗಳಿಗೆ ವೋಟ್ ಮಾಡಬೇಕು. ಎಲ್ಲಾ ಪ್ರಕ್ರಿಯೆ ಮುಗಿದ ಅವರ ಹೆಸರಿನಲ್ಲಿ ಸಚಿವಾಲಯದಿಂದ ಜನರೇಟ್ ಆಗುವ ಪ್ರಮಾಣಪತ್ರ ಡೌನ್‌ಲೋಡ್ ಮಾಡಿಕೊಳ್ಳಬೇಕು’ ಎಂದು ಹೇಳಿದರು.
