ಉದಯವಾಹಿನಿ, ಮೇಲುಕೋಟೆ: ಐತಿಹಾಸಿಕ ಪ್ರವಾಸಿ ತಾಣ ಹಾಗೂ ಧಾರ್ಮಿಕ ಕ್ಷೇತ್ರದವಾದ ಮೇಲುಕೋಟೆಗೆ ಪ್ರವಾಸಿಗರ ದಂಡು ಹರಿದು ಬರುತ್ತಿದೆ. ಈ ಕ್ಷೇತ್ರದಲ್ಲಿ ಕೋತಿಗಳ ಉಪಟಳ ಮಿತಿ ಮೀರಿದ್ದು, ಕೋತಿಗಳ ಕಾಟಕ್ಕೆ ಪ್ರವಾಸಿಗರು, ಸ್ಥಳೀಯರು ಹೈರಾಣಾಗಿ ಹೋಗಿದ್ದಾರೆ.
ಚೆಲುವನಾರಾಯಣ ಸ್ವಾಮಿ ದೇವಾಲಯ ಕಲ್ಯಾಣಿ ಹಾಗೂ ಯೋಗಾನರಸಿಂಹ ಸ್ವಾಮಿ ಬೆಟ್ಟದ ಬಳಿ ತಿಂಡಿ-ತಿನಿಸು, ನೀರಿನ ಬಾಟಲ್‌ ಮತ್ತು ಐಸ್‌ ಕ್ರೀಂ ಹಿಡಿದುಕೊಂಡಿರುವ ಪ್ರವಾಸಿಗರೇನಾದರೂ ಕಂಡರೆ ಕೋತಿಗಳು ಕ್ಷಣ ಮಾತ್ರದಲ್ಲಿ ದಾಳಿ ನಡೆಸಿ ಅವರ ಕೈಯಲ್ಲಿರುವುದನ್ನು ಕಿತ್ತು ಮರವೇರುತ್ತವೆ.
ಪ್ರವಾಸಿಗರ ಬ್ಯಾಗ್‌ ಕಿತ್ತುಕೊಂಡು ಓಡಲು ಹೊಂಚು ಹಾಕುತ್ತವೆ.
ಯೋಗಾನರಸಿಂಹ ಸ್ವಾಮಿ ಬೆಟ್ಟದ ಮೇಲೆ ಕೋತಿಗಳದ್ದೇ ರಾಜ್ಯಭಾರ. ಎಲ್ಲೆಲ್ಲೂ ಹಿಂಡು ಹಿಂಡಾಗಿರುವ ಕೋತಿಗಳು ಭಕ್ತರಿಗೆ ಕೊಡಬಾರದ ಕಾಟ ಕೊಡುತ್ತಿವೆ. ಬೆಟ್ಟಕ್ಕೆ ಪೂಜಾ ಸಾಮಾಗ್ರಿಗಳನ್ನು ಬಲವಂತವಾಗಿಯೇ ಕಿತ್ತುಕೊಂಡು ಹೋಗುತ್ತವೆ. ವಾಹನಗಳ ಮೇಲೂ ಕೋತಿಗಳು ದಾಳಿ ಮಾಡಿ ಹಾನಿ ಮಾಡಿರುವ ಘಟನೆಗಳೂ ನಡೆದಿವೆ.

ಭಕ್ತರು, ಪ್ರವಾಸಿಗರ ಜೊತೆಗೆ ಸ್ಥಳೀಯರೂ ಕೋತಿಗಳ ಹಾವಳಿಯಿಂದ ಬೇಸತ್ತು ಹೋಗಿದ್ದಾರೆ. ಮನೆಗಳಿಗೆ ನುಗ್ಗುವ ಕೋತಿಗಳು ಅಡುಗೆ ಸಾಮಾಗ್ರಿಗಳ ಕೊಂಡು ಹೋಗಿ ತಿನ್ನುತ್ತವೆ. ಮನೆಯ ಮೇಲ್ಛಾವಣಿಯ ಹಂಚುಗಳನ್ನು ತೆಗೆದು ಮನೆಗೆ ನುಗ್ಗಿ ಧ್ವಂಸ ಮಾಡುತ್ತಿರುವುದನ್ನು ತಡೆಗಟ್ಟುವುದು ಹೇಗೆ ಎನ್ನುವ ಚಿಂತೆ ಎದುರಾಗಿದೆ. ಕೋತಿಗಳ ಹಾವಳಿಗೆ ಹೆದರಿ ಅಂಗಡಿಗೆ ಕಬ್ಬಿಣದ ಜಾರ್ಲಿ ಹಾಕಿಸಿಕೊಳ್ಳುವ ಪರಿಸ್ಥಿತಿ ಎದುರಾಗಿದೆ’ ಎಂದು ಗ್ರಾ.ಪಂ ಮಾಜಿ ಅಧ್ಯಕ್ಷ ಯೋಗಾನರಸಿಂಹೇಗೌಡ ಬೇಸರ ವ್ಯಕ್ತಪಡಿಸಿದರು.ಕೋತಿಗಳ ಹಾವಳಿ ತಡೆಗೆ ಮಾರ್ಗಸೂಚಿ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕೆಂದು ಹೈಕೋರ್ಟ್ 2014 ರಲ್ಲಿ ಆದೇಶ ನೀಡಿತ್ತು. ಮಂಗಗಳನ್ನು ಸೆರೆಹಿಡಿಯುವ ಮತ್ತು ಪುನರ್ವಸತಿ ಕಲ್ಪಿಸುವ ಕುರಿತಾದ ಮಾರ್ಗಸೂಚಿ ಪರಿಣಾಮಕಾರಿ ಜಾರಿಗೊಳಿಸಬೇಕು ಎಂದು ಹೈಕೋರ್ಟ್‌ ನಿರ್ದೇಶನ ನೀಡಿದ್ದು ಈ ಬಗ್ಗೆ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!