ಉದಯವಾಹಿನಿ, ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಭಾರೀ ವಿವಾದ ಸೃಷ್ಟಿಸಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ) ಅಕ್ರಮ ನಿವೇಶನ ಹಂಚಿಕೆ ಪ್ರಕರಣ ಈಗ ಮತ್ತೊಂದು ಹೊಸ ತಿರುವು ಪಡೆದುಕೊಂಡಿದೆ.
ಈಗಾಗಲೇ ಪ್ರಕರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅಭಿಯೋಜನೆ(ಪ್ರಾಸಿಕ್ಯೂಷನ್) ನಡೆಸಲು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅನುಮತಿ ನೀಡಿರುವ ಬೆನ್ನಲ್ಲೇ ತಮಗೆ ಇಂತಹ ಕಡೆಗೆ ನಿವೇಶನ ನೀಡುವಂತೆ ಪಾರ್ವತಿ ಸಿದ್ದರಾಮಯ್ಯ ಮುಡಾ ಅಧಿಕಾರಿಗಳಿಗೆ ಪತ್ರ ಬರೆದಿರು ವುದು ಬೆಳಕಿಗೆ ಬಂದಿದೆ.
ವಿಶೇಷವೆಂದರೆ ಸಿದ್ದರಾಮಯ್ಯನವರು ಈ ಪ್ರಕರಣವನ್ನು ಬಲವಾಗಿ ಸಮರ್ಥಿಸಿಕೊಂಡು ನಾನಾಗಲಿ, ನನ್ನ ಧರ್ಮಪತ್ನಿಯಾಗಲಿ ಇಂತಹ ಕಡೆಯೇ ನಿವೇಶನ ನೀಡಬೇಕೆಂದು ಪತ್ರ ಬರೆದಿದ್ದೇವೆಯೇ? ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದರು. ಪತ್ರಿಕಾಗೋಷ್ಟಿ ಸೇರಿದಂತೆ ಅನೇಕ ಸಂದರ್ಭಗಳಲ್ಲಿ ನಾನಾಗಲಿ, ನನ್ನ ಕುಟುಂಬದ ಯಾವುದೇ ಸದಸ್ಯರು ನಿರ್ಧಿಷ್ಟ ಸ್ಥಳದಲ್ಲೇ ನಿವೇಶನ ಬೇಕೆಂದು ಪತ್ರ ಬರೆದಿಲ್ಲ. ಅವರು ಕೊಟ್ಟ ಕಡೆ ಕಾನೂನುಬದ್ಧವಾಗಿ ನಿವೇಶನ ಪಡೆದುಕೊಂಡಿದ್ದೇವೆ ಎಂದು ಸಮರ್ಥಿಸಿಕೊಂಡರು.
ಇದೀಗ ದಾಖಲೆಗಳ ಪ್ರಕಾರ ಸಿದ್ದರಾಮಯ್ಯನವರ ಪತ್ನಿ ಪಾರ್ವತಿಯವರು ಮೈಸೂರಿನ ವಿಜಯನಗರದ ಎರಡು ಮತ್ತು ಮೂರನೇ ಹಂತದಲ್ಲಿ ತಮ ಭೂಮಿಗೆ 50:50ರ ಅನುಪಾತದಲ್ಲಿ ಪರ್ಯಾಯ ನಿವೇಶನ ನೀಡಬೇಕೆಂದು ಅಂದಿನ ಮುಡಾ ಆಯುಕ್ತರಿಗೆ ಪತ್ರ ಬರೆದಿರುವುದು ಬೆಳಕಿಗೆ ಬಂದಿದೆ.
ಪಾರ್ವತಿಯವರು ಖುದ್ದು ಪತ್ರ ಬರೆದು ಅದರಲ್ಲಿ ಸಹಿ ಹಾಕಿ ನಮಗೆ ಮೈಸೂರಿನ ವಿಜಯನಗರ ಮತ್ತು 2ನೇ ಮತ್ತು 3ನೇ ಹಂತದಲ್ಲಿ ನಿವೇಶನ ನೀಡಬೇಕೆಂದು ಕೋರಿ ಪತ್ರ ಬರೆದಿದ್ದು ಬಹಿರಂಗಗೊಂಡಿದೆ.
ಮತ್ತೊಂದು ವಿಶೇಷವೆಂದರೆ ಈ ಪ್ರಕರಣ ಹೊರಬರುತ್ತಿದ್ದಂತೆ ಮುಡಾ ಅಧಿಕಾರಿಗಳು ನಡೆಸಿರುವ ಕರಾಮತ್ತು ಕೂಡ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿವೆ.
ಏಕೆಂದರೆ ನಿರ್ಧಿಷ್ಟ ಸ್ಥಳದಲ್ಲಿ ನಿವೇಶನ ನೀಡಬೇಕೆಂದು ಕೋರಿದ್ದ ಪತ್ರಕ್ಕೆ ಮುಡಾ ಅಧಿಕಾರಿಗಳು ವೈಟ್ನರ್ ಹಾಕಿ ಮುಚ್ಚುಹಾಕುವ ಪ್ರಯತ್ನ ನಡೆಸಿದ್ದಾರೆ ಎಂಬ ಶಂಕೆ ಕಾಡುತ್ತಿದೆ.ಪ್ರಕರಣ ಹೊರಬರುತ್ತಿದ್ದಂತೆ ಅಧಿಕಾರಿಗಳು ವಿಜಯನಗರದ 2 ಮತ್ತು 3ನೇ ಹಂತದಲ್ಲಿ ನಿವೇಶನ ನೀಡಬೇಕೆಂಬ ಜಾಗಕ್ಕೆ ವೈಟ್ನರ್ ಹಾಕಿದ್ದಾರೆ. ಇದು ಸಹಜವಾಗಿ ಅನುಮಾನಗಳನ್ನು ಹುಟ್ಟುಹಾಕಿದೆ.
