ಉದಯವಾಹಿನಿ, ಮುಂಬೈ: ಷೇರು ಮಾರುಕಟ್ಟೆಯಲ್ಲಿ ಪೆನ್ನಿ ಸ್ಟಾಕ್ ಆಗಿರುವ ಓಕೆ ಪ್ಲೇ ಇಂಡಿಯಾ ಲಿಮಿಟೆಡ್ ಟಾಪ್ ಗೇನರ್‌ಗಳಲ್ಲಿ ಒಂದಾಗಿದ್ದು, ಗುರುವಾರ ಮಾರುಕಟ್ಟೆಗಳು ಪ್ರಾರಂಭವಾದ ಕೆಲವೇ ಕ್ಷಣಗಳಲ್ಲಿ ಶೇಕಡಾ 20 ರಷ್ಟು ಏರಿಕೆ ಕಂಡಿತು. ಒಟ್ಟಾರೆ ಹೇಳುವುದಾದರೆ ಈ ಕಂಪನಿಯ ಷೇರುಗಳು 2 ವರ್ಷದಲ್ಲಿ 1ಲಕ್ಷದಿಂದ 5 ಲಕ್ಷ ರೂ.ಗೆ ಏರಿಕೆ ಕಂಡಂತಾಗಿದೆ.
ಬುಧವಾರ 12.50ಕ್ಕೆ ಕೊನೆಗೊಂಡ ಈ ಷೇರು ಗುರುವಾರ ಶೇ.20ರಷ್ಟು ಏರಿಕೆಯೊಂದಿಗೆ ಅಪ್ಪರ್ ಸರ್ಕ್ಯೂಟ್ ನಲ್ಲಿ ವಹಿವಾಟಾಗುತ್ತಿದೆ. ಅಲ್ಲದೆ, ಈ ಸ್ಟಾಕ್ ಅದರ 52 ವಾರಗಳ ಕಡಿಮೆ ಬೆಲೆಯಿಂದ 50 ಪ್ರತಿಶತದಷ್ಟು ಹೆಚ್ಚಾಗಿದೆ. ಇತ್ತೀಚಿನ ದಿನಗಳಲ್ಲಿ ಕಂಪನಿಯು ಯಾವುದೇ ಪ್ರಮುಖ ಘೋಷಣೆಗಳನ್ನು ಮಾಡದಿದ್ದರೂ ಈ ಷೇರು ಗಮನಸೆಳೆಯುತ್ತಿದೆ. ಮಾರುಕಟ್ಟೆಯ ಪರಿಸ್ಥಿತಿಗಳನ್ನು ಅನುಸರಿಸಿ ಈ ಷೇರುಗಳು ಗಗನಕ್ಕೇರುತ್ತಿವೆ ಎಂದು ವಿಶ್ಲೇಷಕರು ಹೇಳುತ್ತಾರೆ.
ಓಕೆ ಪ್ಲೇ ಇಂಡಿಯಾ ಲಿಮಿಟೆಡ್ ಕಂಪನಿಯು ಪ್ಲಾಸ್ಟಿಕ್ ಆಟಿಕೆಗಳ ದೇಶೀಯ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿದೆ. ತಮ್ಮದೇ ಬ್ರಾಂಡ್ ಅಡಿಯಲ್ಲಿ ಆಟಿಕೆಗಳನ್ನು ತಯಾರಿಸಿ ಮಾರಾಟ ಮಾಡುತ್ತದೆ. ಮಾನ್ಯತೆ ಪಡೆದ ಬ್ರ್ಯಾಂಡ್‌ಗಳ ಸಹಭಾಗಿತ್ವದಲ್ಲಿ 2024-25 ರ ಮೊದಲ ತ್ರೈಮಾಸಿಕದಲ್ಲಿ ಕಂಪನಿಯು 24.77 ಕೋಟಿ ನಿವ್ವಳ ಮಾರಾಟ ಮತ್ತು 0.82 ಕೋಟಿ ನಿವ್ವಳ ಲಾಭವನ್ನು ದಾಖಲಿಸಿದೆ. ವಾರ್ಷಿಕ ಫಲಿತಾಂಶಗಳ ಪ್ರಕಾರ ಕಂಪನಿಯ ನಿವ್ವಳ ಮಾರಾಟವು 9.2 ಪ್ರತಿಶತದಷ್ಟು ಹೆಚ್ಚಿದ್ದು, 145.08 ಕೋಟಿ ರೂ.ಗಳಿಗೆ ತಲುಪಿದೆ. ಅಲ್ಲದೆ, ಕಂಪನಿಯ ನಿವ್ವಳ ಲಾಭವು ಶೇ.257.2 ರಷ್ಟು ಏರಿಕೆಯಾಗಿದ್ದು, ರೂ.5.74 ಕೋಟಿ ರೂ.ಗೆ ತಲುಪಿದೆ.
