ಉದಯವಾಹಿನಿ, ಬೆಂಗಳೂರು: ಭ್ರಷ್ಟಾಚಾರವನ್ನೇ ಉಂಡೆದ್ದು ಮಲಗುತ್ತಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರದಲ್ಲಿ ಇದ್ದರೆಷ್ಟು? ಬಿಟ್ಟರೆಷ್ಟು? ಮೊದಲು ಅಧಿಕಾರದಿಂದ ತೊಲಗಲಿ ಎಂದು ಮಾಜಿ ಸಚಿವ ಡಾ.ಅಶ್ವತ್ಥ ನಾರಾಯಣ ತೀವ್ರ ವಾಗ್ದಾಳಿ ನಡೆಸಿದರು.
ಫ್ರೀಡಂ ಪಾರ್ಕ್‌ನಲ್ಲಿ ಬಿಜೆಪಿ ವತಿಯಿಂದ ಹಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಭ್ರಷ್ಟಾಚಾರ ರಹಿತ ಆಡಳಿತ ನಡೆಸುತ್ತೇವೆ ಎಂದು ಜನತೆ ಮುಂದೆ ವಾಗ್ದಾನ ಮಾಡಿದ್ದ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರವನ್ನೇ ಒಂದಂಶದ ಕಾರ್ಯಕ್ರಮ ಮಾಡಿಕೊಂಡಿದೆ ಎಂದು ವ್ಯಂಗ್ಯವಾಡಿದರು.
ಸರ್ಕಾರ ತೊಲಗುತ್ತದೆಯೋ ಎಂದು ರಾಜ್ಯದ ಜನತೆ ಎದುರು ನೋಡುತ್ತಿದ್ದಾರೆ. ಎಲ್ಲಿ ನೋಡಿದರೂ ಲಂಚ ಲಂಚ ಎಂದು ಜನರು ಹಿಡಿಶಾಪ ಹಾಕುತ್ತಿದ್ದಾರೆ. ಇಂತಹ ದರಿದ್ರ ಸರ್ಕಾರ ಇದ್ದರೂ ಒಂದೇ, ಇಲ್ಲದಿದ್ದರೂ ಒಂದೇ ಎಂದು ಕೆಂಡ ಕಾರಿದರು. ಕಾರ್ಯಾಂಗದ ಮುಖ್ಯಸ್ಥನಾಗಿರುವ ರಾಜ್ಯಪಾಲರು ದಾಖಲೆಗಳನ್ನು ಪರಿಶೀಲಿಸಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುತ್ತಾರೆ. ಕಾನೂನುಬದ್ಧವಾಗಿ ಅದನ್ನು ಎದುರಿಸಬೇಕೇ ವಿನಃ ಬೆಂಬಲಿಗರನ್ನು ಛೂ ಬಿಟ್ಟು ಬಾಯಿಗೆ ಬಂದಂತೆ ಮಾತನಾಡಿಸುವುದು ಸಿದ್ದರಾಮಯ್ಯನವರಿಗೆ ಶೋಭೆ ತರುವುದಿಲ್ಲ ಎಂದು ಟೀಕಾ ಪ್ರಹಾರ ನಡೆಸಿದರು. ರಾಜ್ಯಪಾಲರ ಅನುಮತಿಯನ್ನು ಪ್ರಶ್ನಿಸಿ ನೀವು ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿ. ನ್ಯಾಯಾಲಯವು ಪರಿಶೀಲನೆ ನಡೆಸಿ ಆದೇಶ ನೀಡುತ್ತದೆ. ಅದನ್ನು ಬಿಟ್ಟು ರಾಜ್ಯಪಾಲರ ವಿರುದ್ಧ ಮನಸೋ ಇಚ್ಛೆ ಟೀಕೆ ಮಾಡುವುದು ಕಾಂಗ್ರೆಸ್ ಪಕ್ಷಕ್ಕಾಗಲೀ, ಸಿದ್ದರಾಮಯ್ಯನವರಿಗಾಗಲೀ ಶೋಭೆ ತರದು ಎಂದರು.
