ಉದಯವಾಹಿನಿ, ವಿಜಯಪುರ : ರೈತನಿಲ್ಲದೇ ಜಗವಿಲ್ಲ. ಈ ದೇಶಕ್ಕೆ ಅನ್ನವಿಲ್ಲ. ಆತ ಯಾರೊಬ್ಬರೂ ಹಸಿವಿನಿಂದ ಬಳಲಬಾರದೆಂದು ಮಳೆ ಗಾಳಿ, ಚಳಿಯನ್ನು ಲೆಕ್ಕಿಸದೇ ನಿರಂತರವಾಗಿ ಉಳುಮೆಯಲ್ಲಿ ತೊಡಗಿಸಿಕೊಂಡಿರುತ್ತಾನೆ. ಕಾರಣ ಆತನಿಗೆ ತಾಂತ್ರಿಕ ಬಲ ನೀಡಿ ಅಧಿಕ ಇಳುವರಿ ಪಡೆದು ಆರ್ಥಿಕವಾಗಿ ಸಾವಲಂಬಿಗಳಾಗಲು ಶ್ರಮಿಸಬೇಕೆಂದು ಡೀನ್ ಡಾ. ಎ. ಭೀಮಪ್ಪ ಹೇಳಿದರು.
ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಸರಕೋಡ ಗ್ರಾಮದ ಶ್ರೀ ಪವಾಡ ಬಸವೇಶ್ವರ ದೇವಾಸ್ಥಾನದ ಆವರಣದಲ್ಲಿ ವಿಜಯಪುರ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳಿಂದ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ತಮ್ಮ 12 ವಾರಗಳ ಅವಧಿಯಲ್ಲಿ ವಿವಿಧ ಗ್ರಾಮಗಳ ರೈತರ ಕ್ಷೇತ್ರಗಳಿಗೆ ಭೇಟಿ ನೀಡಿ, ಅವರ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳನ್ನು ಅಭ್ಯಸಿಸಿ, ಅವರ ಸಮಸ್ಯೆಗಳನ್ನು ಅರಿತು ಅದರ ಆಧಾರದ ಮೇಲೆ ವಿವಿಧ ಪ್ರಾಧ್ಯಾಪಕರ ಸಲಹೆ ಪಡೆದು ಮಾಹಿತಿ ನೀಡುವುದರ ಜೊತೆಗೆ ರೈತರಿಂದ ಅನುಭವ ಪಡೆದು ಪರಿಪೂರ್ಣ ಪದವೀಧರರಾಗಿ ಹೊರಹೊಮ್ಮುವರು ಎಂದರು.
ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಮಾತನಾಡಿ, ಈ ಭಾಗದ ರೈತರಿಗೆ ನೀರಾವರಿ ಸೌಲಭ್ಯ ಉಂಟಾಗಿದ್ದು, ಅವರೆಲ್ಲ ನೀರಿನ ಸಮರ್ಥ ಬಳಕೆ ಮಾಡಿಕೊಳ್ಳಬೇಕು, ಮಣ್ಣು ಪರೀಕ್ಷೆ ಆಧಾರಿತ ರಸಗೊಬ್ಬರ ಬಳಸಬೇಕು, ಸುಸ್ಥಿರ ಸಾವಯವ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳಲು ವಿದ್ಯಾರ್ಥಿಗಳು ತಮ್ಮ ಅವಧಿಯಲ್ಲಿ ವಿವಿಧ ತಜ್ಞರ ಸಲಹೆ ಪಡೆದು ರೈತರಿಗೆ ಮಾರ್ಗದರ್ಶನ ನೀಡುವರೆಂದರು.
ಕೀಟ ವಿಭಾಗ ಪ್ರಾಧ್ಯಾಪಕ ಡಾ. ಎ.ಪಿ. ಬಿರಾದಾರ ಅವರು ತೊಗರಿ ಬೆಳೆಯ ಸಮಗ್ರ ಕೀಟ ನಿರ್ವಹಣೆ ಮತ್ತು ಕಬ್ಬು ಬೆಳೆಯ ಬೇಸಾಯ ಕ್ರಮಗಳು ಮತ್ತು ಬೆಳೆಗೆ ತಗಲುವ ವಿವಿಧ ಕೀಟ ಮತ್ತು ರೋಗಗಳ ಕುರಿತು ಸುದೀರ್ಘ ಉಪನ್ಯಾಸ ನೀಡಿದರು.

Leave a Reply

Your email address will not be published. Required fields are marked *

error: Content is protected !!