ಉದಯವಾಹಿನಿ, ಬೆಂಗಳೂರು: ಕೊಲೆ ಆರೋಪಿ ನಟ ದರ್ಶನ್ ಹಾಗೂ ಕುಖ್ಯಾತ ರೌಡಿಗಳಿಗೆ ಜೈಲಿನಲ್ಲಿ ರಾಜಾತಿಥ್ಯ ನೀಡಿದ ಘಟನೆಗೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಕಾರಾಗೃಹದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಕಾರಾಗೃಹಗಳು ಮತ್ತು ಸುಧಾರಣಾ ಸೇವೆಗಳ ಇಲಾಖೆ ಡಿಜಿಪಿ ಮಾಲಿನಿ ಕೃಷ್ಣಮೂರ್ತಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಕಾರಾಗೃಹಕ್ಕೆ ಭೇಟಿ ನೀಡಿದ ಅವರು, ನೀವು ಮಾಡುವಂತಹ ಇಂತಹ ಕೆಲಸಗಳಿಂದ ಹಿರಿಯ ಅಧಿಕಾರಿಗಳು ತಲೆ ತಗ್ಗಿಸಬೇಕಾಗುತ್ತದೆ. ಈ ಘಟನೆಯಿಂದ ಇಡೀ ಇಲಾಖೆಗೆ ಕೆಟ್ಟ ಹೆಸರು ಬರುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು. ಈ ಘಟನೆಯಲ್ಲದೆ ಬೇರೆ ಖೆೈದಿ ಅಥವಾ ವಿಚಾರಣಾ ಖೆೈದಿಗಳಿಗೆ ಈ ರೀತಿಯ ರಾಜಾತಿಥ್ಯ ನೀಡಲಾಗಿದೆಯೇ?, ಬೇರೆ ಇನ್ನೇನಾದರೂ ಸವಲತ್ತು ಒದಗಿಸಲಾಗಿದೆಯೇ?, ಒಂದು ವೇಳೆ ಆ ರೀತಿಯ ಸೌಲಭ್ಯಗಳನ್ನು ಕೊಡುತ್ತಿದ್ದರೆ ತಕ್ಷಣ ನಿಲ್ಲಿಸಿ, ಇಲ್ಲದಿದ್ದರೆ ನಿಮ ಮೇಲೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಪ್ರತಿ ಸಭೆಯಲ್ಲೂ ಸಹ ನಾವು ಪದೇಪದೇ ಜೈಲಿನಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಿಬ್ಬಂದಿಗಳಿಗೆ ತಿಳಿಸಿದ್ದೇವೆ. ಆದರೂ ಸಹ ಇಂತಹ ಕೆಲಸ ಮಾಡುತ್ತೀರಿ. ಯಾರು, ಎಷ್ಟೇ ದೊಡ್ಡವರಾದರೂ ಅವರಿಗೆ ಯಾವುದೇ ರೀತಿಯ ಹೆಚ್ಚಿನ ಸವಲತ್ತು ನೀಡಬಾರದು. ಜೈಲಿನ ನಿಯಮಾವಳಿ ಪ್ರಕಾರವೇ ಅವರಿಗೆ ಸೌಲಭ್ಯ ಒದಗಿಸಬೇಕು. ಅದಕ್ಕಿಂತ ಹೆಚ್ಚಿಗೆ ಒದಗಿಸಬಾರದು. ಅದು ಕಾನೂನು ಬಾಹಿರ ಎಂದರು.
ದರ್ಶನ್ಗೆ ಈ ವ್ಯವಸ್ಥೆ ಮಾಡಿಕೊಟ್ಟವರ್ಯಾರು? ಕುಖ್ಯಾತ ರೌಡಿಗಳ ಸಂಪರ್ಕ ದರ್ಶನ್ಗೆ ಕಲ್ಪಿಸಿದವರ್ಯಾರು? ದರ್ಶನ್ ಜೊತೆಯಲ್ಲಿ ಕುಳಿತುಕೊಳ್ಳಲು ಹಾಗೂ ಅವರಿಗೆ ಚೇರು, ಟೀಫಾಯಿ ವ್ಯವಸ್ಥೆ ಮಾಡಿದವರ್ಯಾರು? ಇದು ಎಷ್ಟು ದಿನದಿಂದ ನಡೆಯುತ್ತಿದೆ? ಇದರ ಹಿಂದೆ ಯಾರ್ಯಾರಿರಿದ್ದಾರೆ? ಇದಕ್ಕಾಗಿ ಎಷ್ಟು ಹಣ ಪಡೆದುಕೊಂಡಿದ್ದೀರಿ? ಬೇಗ ತಿಳಿಸಿ ಎಂದು ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಡಿಜಿಪಿಯವರು ತರಾಟೆಗೆ ತೆಗೆದುಕೊಂಡರು.
ಇದಕ್ಕೂ ಮುನ್ನ ಡಿಜಿಪಿಯವರು ಜೈಲಿನ ಎಲ್ಲಾ ಬ್ಯಾರಕ್ಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
