ಉದಯವಾಹಿನಿ, ಹಾವೇರಿ: ಗಣಪತಿ ಹಬ್ಬದ ಆಚರಣೆಗೆ ದಿನಗಣನೆ ಶುರುವಾಗಿದ್ದು, ಇದರ ನಡುವೆಯೇ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಮೂರ್ತಿಗಳು ನಗರಕ್ಕೆ ಕಾಲಿಟ್ಟಿವೆ. ನಿಷೇಧದ ನಡುವೆಯೂ ಪಿಒಪಿ ಮೂರ್ತಿ ಮಾರಾಟ ನಡೆಯುತ್ತಿದ್ದು, ಅದನ್ನು ತಡೆಯಬೇಕಾದ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ.
ಪರಿಸರಕ್ಕೆ ಹಾನಿ ಉಂಟು ಮಾಡುವ ಪಿಒಪಿ ಮೂರ್ತಿಗಳ ತಯಾರಿಕೆ, ಪ್ರತಿಷ್ಠಾಪನೆ ಹಾಗೂ ವಿಸರ್ಜನೆಯನ್ನು ಸರ್ಕಾರ ನಿಷೇಧಿಸಿದೆ. ಇದರ ನಡುವೆಯೂ ನಗರದ ಕೆಲವೆಡೆ ಪಿಒಪಿ ಮೂರ್ತಿಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟುಕೊಂಡು, ಮಾರಾಟ ಮಾಡಲಾಗುತ್ತಿದೆ. ನಗರಸಭೆ ಅಥವಾ ತಾಲ್ಲೂಕು ಆಡಳಿತದ ಅಧಿಕಾರಿಗಳು ಮಾತ್ರ, ತಮಗೆ ಸಂಬಂಧವಿಲ್ಲದವರಂತೆ ವರ್ತಿಸುತ್ತಿದ್ದಾರೆ.

ಹಬ್ಬದ ದಿನಗಳು ಹತ್ತಿರವಾಗುತ್ತಿದ್ದಂತೆ ಲಾರಿಗಳು ಹಾಗೂ ಕಂಟೇನರ್‌ಗಳಲ್ಲಿ ಬೃಹತ್ ಗಾತ್ರದ ಪಿಒಪಿ ಮೂರ್ತಿಗಳನ್ನು ನಗರಕ್ಕೆ ತರಲಾಗಿದೆ. ನಗರದ ಹೊರವಲಯ ಹಾಗೂ ಜನರು ಹೆಚ್ಚು ಓಡಾಡದ ಜಾಗಗಳಲ್ಲಿ ಪಿಒಪಿ ಮೂರ್ತಿಗಳನ್ನು ಇರಿಸಲಾಗಿದೆ. ಮೂರ್ತಿಗಳ ಬಗ್ಗೆ ಅಪರಿಚಿತರಿಗೆ ತಿಳಿಯಬಾರದೆಂದು, ಅವುಗಳ ಮೇಲೆ ಪ್ಲಾಸ್ಟಿಕ್ ಹೂದಿಕೆ ಹೂದಿಸಲಾಗಿದೆ.

ಜನರು ತಮ್ಮ ಮನೆಗಳಲ್ಲಿ ಮಣ್ಣಿನ ಗಣಪತಿಗಳನ್ನು ಹೆಚ್ಚಾಗಿ ಕೂರಿಸುತ್ತಾರೆ. ಇವರು ಪಿಒಪಿ ಮೂರ್ತಿಗಳನ್ನು ಖರೀದಿಸುವುದು ಕಡಿಮೆ. ಸಾರ್ವಜನಿಕ ಸ್ಥಳಗಳಲ್ಲಿ ಗಣಪತಿ ಕೂರಿಸುವ ಕೆಲವರು, ಪಿಒಪಿ ಮೂರ್ತಿಗಳ ಮೊರೆ ಹೋಗುತ್ತಿದ್ದಾರೆ. ಇಂಥವರಿಗಾಗಿಯೇ ಕೆಲವರು, ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಪಿಒಪಿ ಮೂರ್ತಿಗಳನ್ನು ತಂದು ಮಾರಾಟಕ್ಕೆ ಇರಿಸುತ್ತಿದ್ದಾರೆ.ಬೃಹತ್ ಗಾತ್ರದ ಮೂರ್ತಿಗಳನ್ನು ಅಚ್ಚುಗಳಲ್ಲಿ ಸಿದ್ಧಪಡಿಸಿ ತರಲಾಗಿದೆ. ಇವುಗಳಿಗೆ ಸದ್ಯ ಬಿಳಿ ಬಣ್ಣ ಮಾತ್ರ ಹಚ್ಚಲಾಗಿದೆ. ಮೂರ್ತಿಗಳನ್ನು ಯಾರಾದರೂ ಖರೀದಿಸಿದರೆ, ಅವರ ಬೇಡಿಕೆಗೆ ತಕ್ಕಂತೆ ಬಣ್ಣ ಹಚ್ಚಿ ಸಿದ್ಧಪಡಿಸಲಾಗುತ್ತದೆ.ಹಾವೇರಿ, ರಾಣೆಬೆನ್ನೂರು, ಹಾನಗಲ್, ಹಿರೇಕೆರೂರು, ರಟ್ಟೀಹಳ್ಳಿ, ಶಿಗ್ಗಾವಿ, ಸವಣೂರು ಹಾಗೂ ಬ್ಯಾಡಗಿ ತಾಲ್ಲೂಕಿನ ಹಲವು ಕಡೆಗಳಲ್ಲಿ ಸಾರ್ವಜನಿಕ ಗಣಪತಿ ಕೂರಿಸಲಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!