ಉದಯವಾಹಿನಿ, ಬೆಂಗಳೂರು: ಜೈಲಿನಲ್ಲಿ ನಟ ದರ್ಶನ್ ಅಂತಹವರಿಗೆ ಎಲ್ಲ ವ್ಯವಸ್ಥೆ ಆಗುತ್ತದೆ. ನಾನು ಜೈಲಿನಲ್ಲಿದ್ದಾಗ ನನಗೆ ಹೊರಗಡೆಯಿಂದ ಒಂದೂ ಇಡ್ಲಿಯನ್ನೂ ಕೊಡಲಿಲ್ಲ. ಜೈಲಿನಲ್ಲಿ ಎಲ್ಲದಕ್ಕೂ ಹಣ ನಿಗದಿಯಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ನಾರಾಯಣಗೌಡ ದೂರಿದ್ದಾರೆ.
ಪರಪ್ಪನ ಅಗ್ರಹಾರದಲ್ಲಿ ನಟ ದರ್ಶನ್‌ಗೆ ರಾಜ್ಯಾತಿಥ್ಯ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಅವರು, ನಟ ದರ್ಶನ್ ಅವರಂತ ದೊಡ್ಡವರಿಗೆ ಜೈಲಿನಲ್ಲಿ ಎಲ್ಲ ವ್ಯವಸ್ಥೆ ಮಾಡಿಕೊಡುತ್ತಾರೆ. ಆದರೆ ಬಡ ಖೈದಿಗಳಿಗೆ ಕಳಪೆ ಆಹಾರ ನೀಡುತ್ತಾರೆ ಎಂದು ದೂರಿದರು. ಜೈಲಿನಲ್ಲಿ ಏನು ಬೇಕಾದರೂ ಸಿಗುತ್ತದೆ ಎಲ್ಲದಕ್ಕೂ ಹಣ ಕೊಡಬೇಕು ಅಷ್ಟೇ ಎಂದು ಅವರು ಆರೋಪಿಸಿದರು.
ನಾನು ಕನ್ನಡಕ್ಕಾಗಿ ಹೋರಾಡಿ ಜೈಲು ಸೇರಿದ್ದೆ. ೧೬ ತಿಂಗಳುಗಳ ಕಾಲ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದೆ. ಆ ವೇಳೆ ನನಗೆ ಹುಷಾರಿಲ್ಲ ಎಂದರೂ ಒಂದು ಇಡ್ಲಿಯನ್ನು ಹೊರಗಿನಿಂದ ತರಲು ಬಿಡಲಿಲ್ಲ. ಜೈಲಿನ ಆಹಾರವನ್ನೇ ತಿನ್ನಿ ಎಂದರು. ಆದರೆ ದರ್ಶನ್ ರವರಂತಹ ದೊಡ್ಡವರಿಗೆ ಹೊರಗಿನ ಆಹಾರ ಎಲ್ಲ ವ್ಯವಸ್ಥೆಯನ್ನು ಮಾಡುತ್ತಾರೆ ಎಂದು ನಾರಾಯಣಗೌಡ ಕಿಡಿಕಾರಿದರು.
