
ಉದಯವಾಹಿನಿ, ಬೆಂಗಳೂರು: ಶೀಲ ಶಂಕಿಸಿ ಪತ್ನಿಯನ್ನು ಕೊಲೆ ಮಾಡಿ, ಆಕೆಯನ್ನು ಬೇರೆ ಯಾರೋ ಹತ್ಯೆ ಮಾಡಿದ್ದಾರೆ ಎಂದು ನಾಟಕವಾಡುತ್ತಿದ್ದ ಆರೋಪಿ ಪತಿಯನ್ನು ಬಾಗಲೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪತ್ನಿ ಮುಮ್ತಾಜ್ ಳನ್ನು ಕಬ್ಬಿಣದ ರಾಡ್ ನಿಂದ ಹೊಡೆದು ಕೊಲೆಗೈದಿದ್ದ ಆಂಧ್ರಪ್ರದೇಶದ ಚಿತ್ತೂರು ಮೂಲದ ಮೆಹಬೂಬ್ ಪಾಷಾ (೫೦) ಬಂಧಿತ ಆರೋಪಿಯಾಗಿದ್ದಾನೆ.
ಆರೋಪಿಗೆ ಇಬ್ಬರು ಪತ್ನಿಯರಿದ್ದು, ಕೂಲಿ ಕೆಲಸ ಮಾಡಿಕೊಂಡು ತನ್ನ ಎರಡನೇ ಪತ್ನಿ ಮುಮ್ತಾಜ್ ಜೊತೆ ಬಾಗಲೂರಿನ ರಜಾಕ್ ಸಾಬ್ ಪಾಳ್ಯದಲ್ಲಿ ವಾಸವಿದ್ದ. ಕಳೆದ ಆ. ೨೫ರಂದು ಬಾಗಲೂರು ಪೊಲೀಸ್ ಠಾಣೆಗೆ ಬಂದಿದ್ದ ಆರೋಪಿ, ”ಆಗಸ್ಟ್ ೨೪ರಂದು ಸಂಬಂಧಿಕರ ಮನೆಯಲ್ಲಿ ಕಾರ್ಯಕ್ರಮದ ನಿಮಿತ್ತ ನಾನು ಕೋಲಾರಕ್ಕೆ ಹೋಗಿದ್ದೆ. ಪತ್ನಿಗೆ ಕರೆ ಮಾಡಿದಾಗ ಆಕೆ ಸ್ವೀಕರಿಸಲಿಲ್ಲ. ಬೆಳಗ್ಗೆ ಮನೆಗೆ ಬಂದು ನೋಡಿದಾಗ ಮನೆಯಲ್ಲಿಯೂ ಇರಲಿಲ್ಲ. ನಾನು ಕೆಲಸ ಮಾಡುತ್ತಿದ್ದ ಸೀಬೆ ತೋಟದಲ್ಲಿ ಯಾರೋ ಆಕೆಯನ್ನು ಕೊಲೆ ಮಾಡಿದ್ದಾರೆ” ಎಂದು ದೂರು ನೀಡಿದ್ದ.
ದೂರು ಸ್ವೀಕರಿಸಿ ತನಿಖೆ ಆರಂಭಿಸಿದ್ದ ಪೊಲೀಸರು, ಆರೋಪಿಯ ಮಾತಿನ ಮೇಲೆ ಅನುಮಾನಗೊಂಡು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಸಲಿ ವಿಚಾರ ಬಯಲಾಗಿದೆ. ಪತ್ನಿಯ ಮೇಲೆ ಅನುಮಾನ ಹೊಂದಿದ್ದ ಆರೋಪಿ ಆಗಸ್ಟ್ ೨೪ರಂದು ಆಕೆಯನ್ನು ತಾನು ಕೆಲಸ ಮಾಡುತ್ತಿದ್ದ ಸೀಬೆ ತೋಟಕ್ಕೆ ಕರೆದೊಯ್ದು ಕಬ್ಬಿಣದ ರಾಡ್ ನಿಂದ ಆಕೆಯ ತಲೆಗೆ ಹೊಡೆದು ಕೊಲೆ ಮಾಡಿದ್ದ. ಬಳಿಕ ಆಕೆಯ ಶವವನ್ನು ಅಲ್ಲಿಯೇ ಬಿಟ್ಟು ರಾತ್ರಿಯಿಡಿ ಮನೆಗೆ ಹೋಗದೇ ಹೊರಗಡೆಯೇ ಉಳಿದಿದ್ದ. ಬೆಳಗ್ಗೆ ಮನೆಗೆ ತೆರಳಿ, ಏರಿಯಾದಲ್ಲಿ ಯಾರಿಗೂ ಅನುಮಾನ ಬಾರದಂತೆ ತಾನೇ ಬಂದು ದೂರು ನೀಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
