ಉದಯವಾಹಿನಿ, ಚನ್ನಪಟ್ಟಣ: ನಗರದ ಕಸದ ಸಮಸ್ಯೆಗೆ ಅಂತ್ಯವಾಡಲು ಜಿಲ್ಲಾಡಳಿತ ಮುಂದಾಗಿದ್ದು, ತಾಲ್ಲೂಕಿನ ಕನ್ನಮಂಗಲ ಹಾಗೂ ಚೋಳಮಾರನಹಳ್ಳಿ ಗ್ರಾಮಗಳಲ್ಲಿ ಒಟ್ಟು 9.28 ಎಕರೆ ಜಾಗದಲ್ಲಿ ಘನ ಮತ್ತು ದ್ರವ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಮಾಡಲು ಭೂಮಿ ಕಾಯ್ದಿರಿಸಿ ಆದೇಶ ಹೊರಡಿಸಿದೆ. ಕನ್ನಮಂಗಲ ಗ್ರಾಮದ ಸರ್ವೆ ನಂಬರ್ 148 ರ ಸರ್ಕಾರಿ ಗೋಮಾಳ 1.01 ಎಕರೆ ಹಾಗೂ ಚೋಳಮಾರನಹಳ್ಳಿ ಗ್ರಾಮದ ಸರ್ವೆ ನಂಬರ್ 90ರ ಸರ್ಕಾರಿ ಗೋಮಾಳ ಖರಾಬು ಕಟ್ಟೆ 8.27 ಎಕರೆ ಸೇರಿ ಒಟ್ಟು 9.28 ಎಕರೆ ಜಮೀನನನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಕರ್ನಾಟಕ ಭೂಕಂದಾಯ ಅಧಿನಿಯಮ 1964ರ ಕಲಂ71 ರ ಅಡಿಯಲ್ಲಿ ಕೆಲವು ಷರತ್ತುಗಳೊಂದಿಗೆ ಭೂಮಿ ಕಾಯ್ದಿರಿಸಿರುವುದಾಗಿ ಜಿಲ್ಲಾಧಿಕಾರಿ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

ಕಾಯ್ದಿರಿಸಿದ ಜಮೀನಿನಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಮಾಡುವ ಮೊದಲು ಶಾಸನಬದ್ಧವಾಗಿ ಪಡೆಯಬೇಕಾದ ಅನುಮತಿಯನ್ನು ಸಂಬಂಧಿಸಿದ ಪ್ರಾಧಿಕಾರಿಗಳಿಂದ ಪಡೆಯಬೇಕು. ಈ ಜಮೀನನ್ನು ಯಾವುದೇ ವಿನಾಶಕಾರಿಯಾಗಿ ಅಥವಾ ಖಾಯಂ ಆಗಿ ಹಾನಿಕಾರಕವಾಗುವ ರೀತಿಯಲ್ಲಿ ಬಳಸಬಾರದು ಎಂಬ ಸೂಚನೆಯನ್ನು ಆದೇಶದಲ್ಲಿ ನೀಡಲಾಗಿದೆ. ತಾಲ್ಲೂಕಿನ ವಂದಾರಗುಪ್ಪೆ, ಕನ್ನಮಂಗಲ, ಚೋಳಮಾರನಹಳ್ಳಿ ಗ್ರಾಮಗಳ ಬಳಿ ಸರ್ಕಾರಿ ಗೋಮಾಳವನ್ನು ಗುರ್ತಿಸಿ ಇದನ್ನು ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಮಂಜೂರು ಮಾಡುವಂತೆ ನಗರಸಭೆಯು ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ಇದರಲ್ಲಿ ವಂದಾರಗುಪ್ಪೆ ಸರ್ವೆ ನಂಬರ್ 20 ರಲ್ಲಿಯ 2.08 ಎಕರೆ ಜಮೀನನ್ನು ಬಿಟ್ಟು ಉಳಿದ ಒಟ್ಟು 9.28 ಎಕರೆ ಜಮೀನನ್ನು ಕಾಯ್ದಿರಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!