ಉದಯವಾಹಿನಿ, ನರೇಗಲ್: ಸ್ಥಳೀಯ ಪಟ್ಟಣ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರ 2ನೇ ಅವಧಿಗಾಗಿ ನಡೆಯುವ ಚುನಾವಣೆ ಸೆ.2 ರಂದು ನಿಗದಿಯಾಗಿದೆ. ಸಂಖ್ಯಾಬಲದ ಆಧಾರದ ಮೇಲೆ ಆಡಳಿತಕ್ಕೆ ಬರುವುದು ಖಚಿತ ಎಂದುಕೊಂಡಿದ್ದ ಬಿಜೆಪಿಗೆ ಅವರದೇ ಪಕ್ಷದ ಆರು ಜನ ಸದಸ್ಯರ ಮೊಬೈಲ್ ಸ್ವಿಚ್ ಆಫ್ ಆಗಿರುವುದು ಹಾಗೂ ನರೇಗಲ್ ಪಟ್ಟಣದಲ್ಲಿ ಕಾಣಿಸಿಕೊಳ್ಳದಿರುವುದು ಶಾಕ್ ನೀಡಿದೆ.
ಅದರಲ್ಲೂ ಈ ಹಿಂದಿನ ಅವಧಿಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ, ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಗಳನ್ನು ಅನುಭವಿಸಿದ್ದ ಸದಸ್ಯರೇ ಕಾಣೆಯಾಗಿರುವುದು ಹಲವು ಸಂಶಯಗಳಿಗೆ ಎಡೆಮಾಡಿದೆ.
ಒಟ್ಟು 17 ಸದಸ್ಯ ಬಲದ ನರೇಗಲ್ ಪಟ್ಟಣ ಪಂಚಾಯ್ತಿಯಲ್ಲಿ 12 ಬಿಜೆಪಿ, 3 ಕಾಂಗ್ರೆಸ್, ಇಬ್ಬರು ಪಕ್ಷೇತರ ಸದಸ್ಯರು ಇದ್ದಾರೆ. ಪಕ್ಷೇತರರ ಪೈಕಿ ಈ ಹಿಂದೆ ಒಬ್ಬರು ಕಾಂಗ್ರೆಸ್, ಒಬ್ಬರು ಬಿಜೆಪಿಗೆ ಬೆಂಬಲ ನೀಡಿದ್ದರು. ಇದರಿಂದ ಬಿಜೆಪಿ 13, ಕಾಂಗ್ರೆಸ್ 4 ಸದಸ್ಯ ಬಲ ಹೊಂದಿದೆ. ಹೀಗಾಗಿ ಸ್ಪಷ್ಟ ಬಹುಮತದೊಂದಿಗೆ ಬಿಜೆಪಿ ಆಡಳಿತಕ್ಕೆ ಬರುವುದು ಬಹುತೇಕ ಖಚಿತವಾಗಿತ್ತು.
ಆದರೆ ಆರು ಜನ ಬಿಜಿಪಿ ಸದಸ್ಯರು ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಅಷ್ಟೇ ಅಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯೆಯ ಪತಿಯು ಕೂಡ ಕಳೆದೆರಡು ದಿನಗಳಿಂದ ಮನೆಯಲ್ಲಿ ಕಾಣುತ್ತಿಲ್ಲ. ಅವರು ತಮ್ಮ ಮೊಬೈಲ್ ಅನ್ನು ಅಳಿಯನಿಗೆ ಕೊಟ್ಟು ಹೋಗಿದ್ದಾರೆ. ಹೀಗಾಗಿ ಕಾಂಗ್ರೆಸ್ ವಿವಿಧ ತಂತ್ರಗಳನ್ನು ರೂಪಿಸಿ ಅಧಿಕಾರಿ ಪಡೆಯಬಹುದು ಎನ್ನುವ ಚರ್ಚೆ ಶುರುವಾಗಿದೆ.ಪಟ್ಟಣ ಪಂಚಾಯಿತಿಯ ಎರಡೂ ಸ್ಥಾನಗಳಿಗೆ ಸಾಮಾನ್ಯ ಮೀಸಲಾತಿ ಪ್ರಕಟವಾದ ದಿನದಿಂದ ಆಕಾಂಕ್ಷಿಗಳು ಗದ್ದುಗೆ ಏರಲು ಪೈಪೋಟಿ ನಡೆಸಿದ್ದರು. ಮಾಜಿ ಸಚಿವ ಕಳಕಪ್ಪ.ಜಿ.ಬಂಡಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಅಂತಿಮ ನಿರ್ಣಯಕ್ಕಾಗಿ ಸೋಮವಾರ ಸಭೆ ಕರೆದಿದ್ದರು.
ಭಾನುವಾರ ರಾತ್ರಿ ಸಭೆಗೆ ಬರುವುದಾಗಿ ಭರವಸೆ ನೀಡಿದ್ದ ಸದಸ್ಯೆ ವಿಜಯಲಕ್ಷ್ಮಿ ಚಲವಾದಿ, ಸದಸ್ಯರಾದ ಕುಮಾರಸ್ವಾಮಿ ಕೋರಧಾನ್ಯಮಠ, ಫಕೀರಪ್ಪ ಬಂಬ್ಲಾಪುರ, ಫಕೀರಪ್ಪ ಮಳ್ಳಿ, ಈರಪ್ಪ ಜೋಗಿ, ಮಲ್ಲಿಕಸಾಬ್ ರೋಣದ ಅವರು ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಗೈರಾಗಿದ್ದಾರೆ. ಕಳೆದೆರಡು ದಿನಗಳಿಂದ ಯಾರ ಕಣ್ಣಿಗೂ ಕಾಣಿಸುತ್ತಿಲ್ಲ. ಹೀಗಾಗಿ ಆಪರೇಷನ್ ಹಸ್ತಕ್ಕೆ ಸದಸ್ಯರು ಒಳಗಾಗದರೆ ಎನ್ನುವ ಚರ್ಚೆ ಜೋರಾಗಿದೆ.
ಇದು ನಮಗೆ ನೋವು ತರಿಸಿದೆಮುತ್ತಣ್ಣ ಕಡಗದ ಅಧ್ಯಕ್ಷ ಬಿಜೆಪಿ ರೋಣ ಮಂಡಲವಿವಿಧ ಬೇಡಿಕೆಗಾಗಿ ಆರು ಸದಸ್ಯರು ಮುನಿಸಿಕೊಂಡಿದ್ದಾರೆ ಹೊರತು ಪಕ್ಷಕ್ಕೆ ದ್ರೋಹ ಮಾಡುವುದಿಲ್ಲ. ಅವರು ಪಕ್ಷದ ಮುಖಂಡರ ಸಂಪರ್ಕದಲ್ಲಿದ್ದು ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿ ಆಡಳಿತ ಹಿಡಿಯಲಿದೆ.
