ಉದಯವಾಹಿನಿ, ಕೆ.ಆರ್.ಪುರ: ರಸ್ತೆ, ನೀರು, ಒಳಚರಂಡಿ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿ ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಶ್ರಮಿಸುತ್ತೇನೆ ಎಂದು ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿ ತಿಳಿಸಿದರು. ಮಹದೇವಪುರ ಕ್ಷೇತ್ರದ ಶೀಗೆಹಳ್ಳಿಯಲ್ಲಿ ಆಯೋಜಿಸಿದ್ದ ಗ್ರಾಮಸಭೆಯಲ್ಲಿ ಭಾಗವಹಿಸಿ ಮಾತನಾಡಿದರು, ಜನರು ಜೀವನ ನಡೆಸಬೇಕಾದರೇ ರಸ್ತೆ, ನೀರು, ಒಳಚರಂಡಿ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಕರ್ಯಗಳ ಅವಶ್ಯಕತೆ ಇದ್ದು, ಅವುಗಳನ್ನು ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ದುಡಿಯುತ್ತಿದ್ದೇನೆ. ಈ ಹಿಂದೆ ನನ್ನ ಪತಿ ಅರವಿಂದ ಲಿಂಬಾವಳಿ ೧೫ ವರ್ಷಗಳ ಅವಧಿಯಲ್ಲಿ ಸಾಕಷ್ಟು ಅಭಿವೃದ್ದಿಗಳನ್ನು ಮಾಡಿದ್ದಾರೆ, ಈಗ ನನ್ನ ಪ್ರಯತ್ನವು ಅದೇ ಆಗಿದ್ದು ಮಹದೇವಪುರವನ್ನು ಮಾದರಿ ಕ್ಷೇತ್ರವಾಗಿಸುವುದು ನನ್ನ ಗುರಿ ಎಂದರು.
ಸಾರ್ವಜನಿಕರು ಯಾವುದೇ ಸಮಸ್ಯೆಗಳಿದ್ದರೂ ನೇರವಾಗಿ ನನ್ನನ್ನು ಭೇಟಿ ಮಾಡಬಹುದು, ಸಾರ್ವಜನಿಕರಿಗೆ ಅನುಕೂಲವಾಗಲೆಂದು ಮಾರತ್ ಹಳ್ಳಿ ಹಾಗೂ ಕಾಟಂನಲ್ಲೂರು ಗೇಟ್ ಬಳಿ ಬಿಜೆಪಿ ಕಚೇರಿಗಳಿದ್ದು ಸಾರ್ವಜನಿಕರು ತಮ್ಮ ಕುಂದುಕೊರತೆಗಳನ್ನು ಬಂದು ಸಲ್ಲಿಸಲು ವ್ಯವಸ್ಥೆ ಮಾಡಲಾಗಿದೆ, ಅಲ್ಲದೇ ಸಮಸ್ಯೆಗಳ ಪರಿಹಾರಕಾರ್ಯ ನಡೆಯಲಿದೆ ಎಂದರು.
ಹೆಚ್ಚುವರಿ ಕೊಠಡಿಗಳ ನಿರ್ಮಾಣಕ್ಕೆ ಗುದ್ದಲಿಪೂಜೆ ಹಾಗೂ ನೂತನವಾಗಿ ನಿರ್ಮಾಣ ಮಾಡಲಾದ ಆಟದ ಮೈದಾನವನ್ನು ಲೋಕಾರ್ಪಣೆಗೊಳಿಸಲಾಯಿತು. ಗಾಮಾಂತರ ಮಂಡಲ ಅಧ್ಯಕ್ಷ ನಟರಾಜ್, ಇಓ ವಸಂತಕುಮಾರ್, ಬಿಇಓ ಗೋವಿಂದಪ್ಪ, ಅಧ್ಯಕ್ಷೆ ಮಂಗಳಾ,ಉಪಾಧ್ಯಕ್ಷ ಸುರೇಶ್ ಬಾಬು, ಮಾಜಿ ಅಧ್ಯಕ್ಷ ಮಧು ಇದ್ದರು.
