ಉದಯವಾಹಿನಿ, ಬೆಂಗಳೂರು: ಸಹ ಶಿಕ್ಷಕರಾಗಿ ಪರಿಗಣಿಸಿದ್ದರೂ ಇದುವರೆಗೂ ಮುಖ್ಯ ಶಿಕ್ಷಕರ ಮುಂಬಡ್ತಿ ಸೇರಿದಂತೆ ಸಹ ಶಿಕ್ಷಕರಿಗೆ ಸಿಗುವ ಸೌಲಭ್ಯಗಳನ್ನು ನೀಡದಿರುವುದು ಹಾಗೂ ಇನ್ನಿತರೆ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಾಳೆ (ಆಗಸ್ಟ್ ೨೯ರಂದು) ನಗರದ ಫ್ರೀಡಂ ಪಾರ್ಕ್‌ನಲ್ಲಿ ರಾಜ್ಯ ಮಟ್ಟದ ಧರಣಿಯನ್ನು ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾದ ಎಸ್ ಚೌಡಪ್ಪ ತಿಳಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆಯನ್ನು ನೀಡಿರುವ ಅವರು, ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಜೊತೆಯಲ್ಲಿಯೇ ಒಂದು ದಿನದ ಸಾಂಕೇತಿಕ ಧರಣಿಯನ್ನು ಹಮ್ಮಿಕೊಳ್ಳಲಾಗಿದೆ. ಸಮಾನ ವೇತನ, ಸಮಾನ ವಿದ್ಯಾರ್ಹತೆ ಹಾಗೂ ಒಂದೇ ನೇಮಕಾತಿ ವಿಧಾನವಿದ್ದರೂ ಸಹ ಶಿಕ್ಷಕರು ಹಾಗೂ ದೈಹಿಕ ಶಿಕ್ಷಕರಲ್ಲಿ ತಾರತಮ್ಯ ಧೋರಣೆ ಮಾಡಲಾಗುತ್ತಿದೆ. ಇದರಿಂದ ಶಿಕ್ಷಕರಲ್ಲಿ ಅಸಮಾನತೆ ಉಂಟಾಗುತ್ತಿದೆ. ಪ್ರೊ ಎಲ್ ಆರ್ ವೈದ್ಯನಾಥ್ ವರದಿಯ ಅನ್ವಯ ದೈಹಿಕ ಶಿಕ್ಷಣ ಶಿಕ್ಷಕರನ್ನು ಸಹ ಶಿಕ್ಷಕರೆಂದು ಪರಿಗಣಿಸಿದ್ದರೂ, ಮುಖ್ಯ ಶಿಕ್ಷಕರ ಮುಂಬಡ್ತಿ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನ ಜಾರಿಗೊಳಿಸಲು ಇಲಾಖಾ ಅಧಿಕಾರಿಗಳು ವಿಳಂಬ ಧೋರಣೆಯನ್ನು ತೋರಿಸುತ್ತಿದ್ದಾರೆ. ಈ ಬಗ್ಗೆ ಈಗಾಗಲೇ ಹಲವಾರು ಬಾರಿ ಮನವಿಗಳನ್ನು ಸಲ್ಲಿಸಲಾಗಿದೆ. ಸರಕಾರದ ಮಟ್ಟದಲ್ಲಿ ಗಮನ ಸೆಳೆಯಲಾಗಿದ್ದರೂ ಕೂಡಾ ಯಾವುದೇ ಪ್ರಯೋಜನವಾಗಿಲ್ಲ. ವಿದ್ಯಾರ್ಥಿಗಳಿಗೆ ತೊಂದರೆ ಆಗದೆ ಇರಲಿ ಎನ್ನುವ ದೃಷ್ಟಿಯಿಂದ ಕಪ್ಪು ಪಟ್ಟಿಯನ್ನು ಧರಿಸುವ ಮೂಲಕ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ. ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಶಾಸಕರು ಮತ್ತು ಹಲವು ಸಚಿವರು ಪ್ರತಿಬಾರಿ ಅಧಿವೇಶನಗಳಲ್ಲಿ ಚರ್ಚೆ ಮಾಡಿ ಈ ಆದೇಶಗಳನ್ನು ಅನುಷ್ಠಾನಗೊಳಿಸುವಂತೆ ಸೂಚನೆ ನೀಡಿಸಿದ್ದಾರೆ. ಆದರೆ ಇದುವರೆಗೂ ಇಲಾಖೆಯಲ್ಲಿ ಸರಕಾರದ ಆದೇಶಗಳನ್ನು ಜಾರಿಗೊಳಿಸಿಲ್ಲ.ಈ ಧೋರಣೆಯನ್ನು ಖಂಡಿಸಿ ಆಗಸ್ಟ್ ೨೯ ರಂದು ರಾಷ್ಟ್ರೀಯ ಕ್ರೀಡಾ ದಿನಚಾರಣೆಯೊಂದಿಗೆ ರಾಜ್ಯಮಟ್ಟದ ಧರಣಿಯನ್ನು ಫ್ರೀಡಂ ಪಾರ್ಕನಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಧರಣಿಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ದೈಹಿಕ ಶಿಕ್ಷಣ ಶಿಕ್ಷಕರು ಭಾಗವಹಿಸಲಿದ್ದು, ಶೀಘ್ರವಾಗಿ ನಮ್ಮ ಬೇಡಿಕೆಗಳನ್ನು ಈಡೇರಿಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಅನಿರ್ದಿಷ್ಟಾವಧಿ ಮುಷ್ಕರವನ್ನು ಪ್ರಾರಂಭಿಸುವುದಾಗಿ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಜೆ. ಚಂದ್ರಶೇಖರ್, ಖಜಾಂಚಿ ಡಿ.ವಿ ಬಾಲರಾಜ್, ಕಾರ್ಯಾಧ್ಯಕ್ಷ ಪಿ.ಡಿ. ಕಾಗೋಡ್ ಎಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!