ಉದಯವಾಹಿನಿ, ಬೆಂಗಳೂರು: ಶ್ರಾವಣ ಮಾಸದ ಕಡೇ ಶನಿವಾರದ ಅಂಗವಾಗಿ ರಾಜ್ಯದೆಲ್ಲೆಡೆ ಇಂದು ಗೋವಿಂದ ನಾಮಸ್ಮರಣೆ ಮೊಳಗಿತ್ತು.
ಇಂದು ಮುಂಜಾನೆಯಿಂದಲೇ ರಾಜ್ಯದ ವೆಂಕಟೇಶ್ವರ, ಶನಿಮಹಾತ, ಆಂಜನೇಯ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಪೂಜೆ ಪುನಸ್ಕಾರಗಳು ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.ಶನಿಶ್ಚರಸ್ವಾಮಿಗೆ ಭಕ್ತರು ಅತ್ಯಂತ ನಿಷ್ಠೆ ಹಾಗೂ ನಿಯಮದಿಂದ ಪೂಜೆ ಸಲ್ಲಿಸುವ ಪದ್ದತಿ ಹಿಂದಿನಿಂದಲೂ ರೂಢಿಸಿಕೊಂಡು ಬಂದಿದ್ದು, ಇಂದು ದೇವಾಲಯಗಳಿಗೆ ತೆರಳಿ ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಧುರೆಯ ಶನಿಮಹಾತ ದೇವಾಲಯದಲ್ಲಿ ವಿವಿಧ ಬಗೆಯ ಪುಷ್ಪಗಳಿಂದ ದೇವಾಲಯಗಳನ್ನು ಶೃಂಗರಿಸಿದ್ದು, ಬೆಂಗಳೂರು, ತುಮಕೂರು, ದೊಡ್ಡಬಳ್ಳಾಪುರ, ನೆಲಮಂಗಲ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಪೂಜೆ ಸಲ್ಲಿಸಿದರು.ಅದೇ ರೀತಿ ಬೆಂಗಳೂರಿನ ಮಾಗಡಿ ರಸ್ತೆಯ ಟೋಲ್ಗೆಟ್ ವೃತ್ತದ ಸಮೀಪವಿರುವ ಶ್ರೀ ಶನೇಶ್ವರ ದೇವಾಲಯದಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳು ನೆರವೇರಿದವು. ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.
