ಉದಯವಾಹಿನಿ, ದೇವರಗುಡ್ಡ: ಇಲ್ಲಿಯ ಸುಕ್ಷೇತ್ರ ಮಾಲತೇಶ ದೇವಸ್ಥಾನಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಶೇಷ ಪೂಜೆ ಸಲ್ಲಿಸಿದರು. ಅರ್ಚಕರು, ಪೂಜಾ ಕೈಂಕರ್ಯಗಳನ್ನು ಪೂರ್ಣಗೊಳಿಸಿದರು. ಬಳಿಕ, ಗಂಗಮಾಳಮ್ಮ ದೇವಸ್ಥಾನಕ್ಕೂ ಭೇಟಿ ನೀಡಿ ನಮಸ್ಕರಿಸಿದರು.
ನಂತರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕಂಚಿನ ಪ್ರತಿಮೆ ಮತ್ತು ಕನಕ ಭವನ ಉದ್ಘಾಟಿಸಿದರು.
ಸಮಾವೇಶದಲ್ಲಿ ಸಚಿವ ಎಚ್.ಕೆ.ಪಾಟೀಲ ಮಾತನಾಡಿ,’ಜನರು ಮತ್ತು ಸ್ಥಳೀಯ ಶಾಸಕರ ಒತ್ತಾಯದಿಂದ ದೇವರಗುಡ್ಡಕ್ಕೆ ಬಂದಿದ್ದೇವೆ. ನನಗೂ ಮತ್ತು ಮುಖ್ಯಮಂತ್ರಿಯವರಿಗೆ ಮಾಲತೇಶ ದೇವರ ಆಶೀರ್ವಾದ ಸಿಕ್ಕಿದೆ’ ಎಂದರು.
‘ಮುಖ್ಯಮಂತ್ರಿ ಅವರಿಗೆ ಕಂಟಕ ಬರಲಿ ಎನ್ನುವವರು ಈಗ ಹೆಚ್ಚಾಗಿದ್ದಾರೆ. ಮುಖ್ಯಮಂತ್ರಿಗೆ ಎದುರಾದ ಕಂಟಕವನ್ನು ನಿವಾರಿಸಲು ಸ್ಥಳೀಯ ಶಾಸಕರು, ಅವರನ್ನು ದೇವರಗುಡ್ಡದ ಮಾಲತೇಶ ದೇವರ ಸನ್ನಿಧಿಗೆ ಕರೆಸಿ ದೇವರಿಗೆ ವಿಶೇಷ ಪೂಜೆ ಮಾಡಿಸಿದ್ದಾರೆ’ ಎಂದರು.
ವಿಶೇಷ ಪೂಜೆ ಬಗ್ಗೆ ಪ್ರಸ್ತಾಪಿಸದ ಮುಖ್ಯಮಂತ್ರಿ ಸಿದ್ದರಾಮಯ್ಯ,’ಊರಿನ ಜನರ ಪ್ರೀತಿ ಹಾಗೂ ಅಭಿಮಾನಕ್ಕೆ ನಾನು ಚಿರಋಣಿ. ಮಾಲತೇಶ ದೇವರು ನಿಮಗೆ, ನಾಡಿಗೆ ಹಾಗೂ ನನಗೆ ಒಳ್ಳೆಯದು ಮಾಡಲೆಂದು ಬಯಸುವೆ’ ಎಂದರು.
‘ಹಿಂದುಳಿದ ವರ್ಗದ ನಾನು ಎರಡನೇ ಬಾರಿ ಮುಖ್ಯಮಂತ್ರಿಯಾದೆ ಎಂಬ ಕಾರಣಕ್ಕೆ ಕೆಲವರಿಗೆ ಹೊಟ್ಟೆ ಉರಿ. ಅದಕ್ಕೆ ಅವರು ಷಡ್ಯಂತ್ರ ಮಾಡುತ್ತಿದ್ದಾರೆ’ ಎಂದರು.ನಾನು ಅಸೂಯೆ ಮತ್ತು ದ್ವೇಷದ ರಾಜಕಾರಣ ಮಾಡುವುದಿಲ್ಲ. ಜನರ ಆಶೀರ್ವಾದ ಇರುವವರೆಗೂ ನನಗೆ ಏನು ಆಗುವುದಿಲ್ಲ. ಯಾವುದಕ್ಕೂ ಹೆದರಲ್ಲ. ಯಾವುದೇ ಪಿತೂರಿ-ಷಡ್ಯಂತ್ರಕ್ಕೂ ಭಯಪಡುವವನಲ್ಲ’ ಎಂದರು.

Leave a Reply

Your email address will not be published. Required fields are marked *

error: Content is protected !!