ಉದಯವಾಹಿನಿ, ಬಂಗಾರಪೇಟೆ: ತಾಲ್ಲೂಕಿನ ಕಾರ್ಯ ನಿರ್ವಹಿಸುತ್ತಿರುವ ವಸತಿ ಶಾಲೆಗಳಿಗೆ ಸರ್ಕಾರವು ಕಾಯಂ ಶಿಕ್ಷಕರನ್ನು ನೇಮಕ ಮಾಡದ ಕಾರಣದಿಂದ ಆ ಶಾಲೆಗಳಿಗೆ ಅತಿಥಿ ಶಿಕ್ಷಕರೇ ಆಸರೆ ಎಂಬ ಪರಿಸ್ಥಿತಿ ಉದ್ಭವಿಸಿದೆ. ತಾಲ್ಲೂಕಿನ ಬೂದಿಕೋಟೆ ಹೋಬಳಿಯ ಯಳೇಸಂದ್ರ ಗ್ರಾಮದ ಮೊರಾರ್ಜಿ ವಸತಿ ಶಾಲೆ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಹಾಗೂ ದೊಡ್ಡ ಪೊನ್ನಾಂಡಹಳ್ಳಿ ಮೊರಾರ್ಜಿ ವಸತಿ ಶಾಲೆಗಳನ್ನು ಶಾಸಕರ ಅನುದಾನ ಸೇರಿದಂತೆ ಇನ್ನಿತರ ಯೋಜನೆಯಡಿ ಲಕ್ಷಾಂತರ ವೆಚ್ಚ ಮಾಡಿ ಸುಂದರ ಕಟ್ಟಡಗಳನ್ನು ನಿರ್ಮಿಸಲಾಗಿದೆ.
ಈ ಶಾಲೆಗಳಲ್ಲಿ ಕೊಠಡಿಗಳ ಸಂಖ್ಯೆ, ಸಭಾಂಗಣ, ಆಟದ ಮೈದಾನ, ಶೌಚಾಲಯ ಸೇರಿದಂತೆ ಯಾವುದೇ ಮೂಲಸೌಕರ್ಯಗಳ ಕೊರತೆ ಇಲ್ಲ. ಇದರಿಂದಾಗಿ ಈ ಶಾಲೆಗಳು ಖಾಸಗಿ ಶಾಲೆಗಳಿಗಿಂತ ಕಡಿಮೆ ಇಲ್ಲದಂತಿವೆ. ಆದರೆ, ಈ ಮೂರು ಶಾಲೆಗಳು ಕಾಯಂ ಶಿಕ್ಷಕರ ಕೊರತೆ ಎದುರಿಸುತ್ತಿವೆ.
ಯಳೇಸಂದ್ರ ಮೊರಾರ್ಜಿ ವಸತಿ ಶಾಲೆಯಲ್ಲಿ ಪ್ರಾಂಶುಪಾಲ, ವಿಜ್ಞಾನ, ಕಂಪ್ಯೂಟರ್ ಶಿಕ್ಷಕರು ಹಾಗೂ ಪ್ರಥಮ ದರ್ಜೆಯ ಸಹಾಯಕ ಹುದ್ದೆಗೆ ಮಾತ್ರವೇ ಕಾಯಂ ನೌಕರರಿದ್ದಾರೆ. ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಪ್ರಾಂಶುಪಾಲ, ವಿಜ್ಞಾನ, ಕಂಪ್ಯೂಟರ್, ದೈಹಿಕ ಶಿಕ್ಷಣಕ್ಕೆ ಮಾತ್ರವೇ ಕಾಯಂ ಶಿಕ್ಷಕರಿದ್ದಾರೆ. ಇನ್ನು ದೊಡ್ಡ ಪೊನ್ನಾಂಡಹಳ್ಳಿಯಲ್ಲಿರುವ ಮೊರಾರ್ಜಿ ವಸತಿ ಶಾಲೆಯಲ್ಲಿ ಪರಿಸ್ಥಿತಿ ಇದಕ್ಕಿಂತ ಏನೂ ಭಿನ್ನವಿಲ್ಲ. ಕಂಪ್ಯೂಟರ್, ಗಣಿತ, ದೈಹಿಕ ಶಿಕ್ಷಣ ಮೂವರು ಮಾತ್ರವೇ ಕಾಯಂ ಶಿಕ್ಷಕರಿದ್ದಾರೆ. ಉಳಿದ ವಿಷಯಗಳಿಗೆ ಮೂರು ವಸತಿ ಶಾಲೆಗಳಲ್ಲಿ ಅತಿಥಿ ಶಿಕ್ಷಕರೇ ಆಸರೆಯಾಗಿದ್ದಾರೆ.
