ಉದಯವಾಹಿನಿ,ಬಸವಕಲ್ಯಾಣ: ತಾಲ್ಲೂಕಿನ ರಾಜೇಶ್ವರದಲ್ಲಿ ಮುಸ್ಲಿಂ ಸಮುದಾಯದವರೂ ಪಾಲ್ಗೊಳ್ಳುವಂಥ ಭಾವೈಕ್ಯ ಸಾರುವ ಚಕ್ಕಡಿ ಓಟದ ಸ್ಪರ್ಧೆ ಸೆಪ್ಟೆಂಬರ್ 2ರಂದು ಹೋಳಾ ಹಬ್ಬದಂದು ನಡೆಯಲಿದೆ. ಸಂಜೆ ಹೊತ್ತು ಚಿಕ್ಕ ಗಾಲಿಗಳಿಗೆ ಕಟ್ಟಿದ ನೊಗವನ್ನು ಎಳೆದುಕೊಂಡು ಜೋಡಿ ಎತ್ತುಗಳು ಓಡುತ್ತಿದ್ದರೆ ಮೈ ಜುಮ್ಮೆನ್ನುತ್ತದೆ.
ರಾಜೇಶ್ವರ ಈಗ ಹೋಬಳಿ ಕೇಂದ್ರ ಆಗಿದ್ದರೂ ಹಿಂದೊಮ್ಮೆ ಹೈದರಾಬಾದ್ ನಿಜಾಮ್ ಕಾಲದಲ್ಲಿ ಜಿಲ್ಲಾ ಕೇಂದ್ರವಿತ್ತು. ಅಂದಿನ ವಿವಿಧ ಕಚೇರಿಗಳಿದ್ದ ಕೋಟೆಯ ಗೋಡೆಯಂತಿರುವ ಆವರಣಗೋಡೆಯಿಂದ ಸುತ್ತುವರಿದಿರುವ ಸ್ಥಳ ಇಲ್ಲಿದೆ. ಇದರ ನಾಲ್ಕು ಕಡೆಗಳಲ್ಲಿಯೂ ದೊಡ್ಡ ಹುಡೆಗಳಿದ್ದವು. ಅವುಗಳಲ್ಲಿ ಕೆಲವು ಸುಸ್ಥಿತಿಯಲ್ಲಿದ್ದು ಗತವೈಭವವನ್ನು ನೆನಪಿಸುತ್ತವೆ. ಆ ಕಾಲದಿಂದ ಹೋಳಾ ಹಬ್ಬಕ್ಕೆ ಎತ್ತುಗಳ ಚಕ್ಕಡಿ ಓಡಿಸುವ ಸಂಪ್ರದಾಯ ಇಲ್ಲಿ ಬೆಳೆದು ಬಂದಿದೆ.

ಹೋಳಾ ಹಬ್ಬ ರೈತರ ಹಬ್ಬವಾಗಿದ್ದು ಕಾರಹುಣ್ಣಿಮೆಯಂತೆಯೇ ತಿಂಡಿ ತಿನಿಸುಗಳನ್ನು ಸಿದ್ಧಪಡಿಸಿ ಎತ್ತುಗಳ ಪೂಜೆ ನೆರವೇರಿಸಲಾಗುತ್ತದೆ. ಬೀದರ್ ಜಿಲ್ಲೆಯ ಅನೇಕ ಕಡೆ ಇದನ್ನು ಆಚರಿಸಲಾಗುತ್ತದೆ. ಬಸವಕಲ್ಯಾಣ ತಾಲ್ಲೂಕಿನಲ್ಲಿಯೂ ಬಹುತೇಕ ಗ್ರಾಮಗಳಲ್ಲಿ ಈ ಹಬ್ಬವಿರುತ್ತದೆ. ಎಲ್ಲೆಡೆ ಎತ್ತುಗಳ ಮೆರವಣಿಗೆ ಹಾಗೂ ಎತ್ತುಗಳ ಓಟ ಹಮ್ಮಿಕೊಳ್ಳಲಾಗುತ್ತದೆ. ಆದರೆ ರಾಜೇಶ್ವರದಲ್ಲಿ ಮಾತ್ರ ಚಕ್ಕಡಿಗಳನ್ನು ಓಡಿಸುವುದರಿಂದ ಇದನ್ನು ನೋಡಲು ದೂರದೂರದ ಜನರು ಬರುತ್ತಾರೆ.

ಎತ್ತುಗಳ ಮೈ ತೊಳೆದು ಕೋಡುಗಳಿಗೆ ಮತಾಟಿ, ಬಾಸಿಂಗ್, ಮಗಡಾ, ಕೊರಳಪಟ್ಟಿ, ಗಂಟೆಸರ ಕಟ್ಟಿ ಮೈಮೇಲೆ ಝೂಲಾ ಬಟ್ಟೆ ಹಾಕಿ ಕುಟುಂಬ ಸಮೇತರಾಗಿ ಪೂಜೆ ಸಲ್ಲಿಸಲಾಗುತ್ತದೆ. ನಂತರದಲ್ಲಿ ಮೆರವಣಿಗೆಯ ಮೂಲಕ ಓಟದ ಸ್ಥಳಕ್ಕೆ ಬರಲಾಗುತ್ತದೆ. ಗ್ರಾಮದ ಪೂರ್ವಕ್ಕೆ ಉತ್ತರಾಭಿಮುಖವಿರುವ ರಸ್ತೆಯಲ್ಲಿ ಒಂದೊಂದರಂತೆ ಬಲೂನ್ ಹಾಗೂ ತಳೀರು, ತೋರಣಗಳಿಂದ ಸಿಂಗರಿಸಿದ ಚಕ್ಕಡಿಗಳನ್ನು ಓಡಿಸಲಾಗುತ್ತದೆ. ಎಲ್ಲ ಜಾತಿ, ಸಮುದಾಯದ ರೈತರು ಚಕ್ಕಡಿಗಳನ್ನು ಓಡಿಸುತ್ತಾರೆ. ಇದನ್ನು ನೋಡುವುದಕ್ಕಾಗಿ ರಸ್ತೆಯ ಎರಡೂ ಬದಿಯಲ್ಲಿ ಜನರು ಕಿಕ್ಕಿರಿದು ಸೇರಿರುತ್ತಾರೆ. ನಂತರ ಹನುಮಾನ ದೇವಸ್ಥಾನದ ಆವರಣದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಗುತ್ತದೆ.

.

Leave a Reply

Your email address will not be published. Required fields are marked *

error: Content is protected !!