ಉದಯವಾಹಿನಿ, ಮೈಸೂರು: ಬಿಜೆಪಿ-ಜೆಡಿಎಸ್ ಮೈತ್ರಿಯ ಒಗ್ಗಟ್ಟಿನ ಭಯದಿಂದಾಗಿ ರಾಜ್ಯ ಕಾಂಗ್ರೆಸ್ ಸರ್ಕಾರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುತ್ತಿಲ್ಲ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಟೀಕಿಸಿದರು.
ಶುಕ್ರವಾರ ನಗರದ ಬಿಜೆಪಿ ಕಚೇರಿಗೆ ಭೇಟಿ ನೀಡಿದ ಅವರು ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿ, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಕಟ್ಟಿ ಹಾಕುವ ಪ್ರಯತ್ನವನ್ನು ಪ್ರಧಾನಿ ನರೇಂದ್ರ ಮೋದಿಯವರು ಮಾಡಿದ್ದರು. ಆದರೂ ಕಾಂಗ್ರೆಸ್ ನೂರು ಸ್ಥಾನ ಗಳಿಸಿಬಿಟ್ಟಿದೆ. ರಾಜ್ಯದಲ್ಲಿ ಉಚಿತ ಭಾಗ್ಯಗಳನ್ನು ಘೋಷಿಸಿ ಅಧಿಕಾರಕ್ಕೆ ಬಂದಿದೆ. ಆದರೆ ಭಾಗ್ಯಗಳ ಬಂಡವಾಳದ ಅರಿವು ಈಗ ಜನರಿಗೆ ಗೊತ್ತಾಗಿದೆ. ಹಾಗಾಗಿ ರಾಜ್ಯ ಸರ್ಕಾರದ ಆಡಳಿತ ವೈಖರಿಯ ವಿರುದ್ಧ ಜನರು ಅಸಮಾಧಾನಗೊಂಡಿದ್ದಾರೆ. ಇದರ ನಡುವೆ ಬಿಜೆಪಿ-ಜೆಡಿಎಸ್ ಮೈತ್ರಿಯಾಗಿ ಚುನಾವಣೆ ಎದುರಿಸುತ್ತಿರುವುದು ಕಾಂಗ್ರೆಸ್‍ನವರಿಗೆ ಸೋಲಿನ ಭೀತಿ ಕಾಡುತ್ತಿದೆ. ಈ ಎರಡು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಹಾಗಾಗಿಯೇ ಅವರು ಜಿ.ಪಂ, ತಾ.ಪಂ, ನಗರಪಾಲಿಕೆಗಳಿಗೆ ಚುನಾವಣೆ ನಡೆಸದೆ ಕಾಲ ದೂಡುತ್ತಿದ್ದಾರೆ. ಈ ಬಗ್ಗೆ ಪ್ರಶ್ನಿಸಿದರೆ, ಬಿಜೆಪಿ-ಜೆಡಿಎಸ್ ನಡುವೆ ಜಗಳ ತಂದಿಟ್ಟು, ಆ ಎರಡು ಪಕ್ಷಗಳು ಬೇರೆ, ಬೇರೆಯಾದ ಬಳಿಕ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುತ್ತೇವೆ ಎಂದು ಹೇಳುತ್ತಿದ್ದಾರೆ. ಆ ಮಟ್ಟಿಗೆ ಕಾಂಗ್ರೆಸ್‍ನವರಿಗೆ ಸೋಲಿನ ಭಯ ಆವರಿಸಿಕೊಂಡಿದೆ ಎಂದು ಲೇವಡಿ ಮಾಡಿದರು.

ಯಾವುದೇ ವೇಳೆಯಲ್ಲಿ ಜಿ.ಪಂ, ತಾ.ಪಂ, ನಗರಪಾಲಿಕೆಗೆ ಚುನಾವಣೆ ಎದುರಾದರೂ ಬಿಜೆಪಿ-ಜೆಡಿಎಸ್ ಒಗ್ಗೂಡಿ ಚುನಾವಣೆ ಎದುರಿಸೋಣ, ವ್ಯಕ್ತಿಗಿಂತ ಪಕ್ಷ ದೊಡ್ಡದು. ಪಕ್ಷಕ್ಕಿಂತ ದೇಶ ದೊಡ್ಡದು. ಹಾಗಾಗಿ ಸಣ್ಣ, ಪುಟ್ಟ ಕಹಿಘಟನೆಗಳನ್ನು, ತಪ್ಪುಗಳನ್ನು ಮರೆತು ಪಕ್ಷಕ್ಕಾಗಿ ಒಗ್ಗಟ್ಟಿನಿಂದ ಕೆಲಸ ಮಾಡೋಣ ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!