ಉದಯವಾಹಿನಿ, ನ್ಯೂಯಾರ್ಕ್(ಯುಎಸ್‌ಎ): ಅಮೆರಿಕದ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ಮತ್ತು ಉಷಾ ವ್ಯಾನ್ಸ್ ದಂಪತಿ ನಾಲ್ಕನೇ ಮಗುವಿನ ನಿರೀಕ್ಷೆಯಲ್ಲಿದ್ದು, ಜುಲೈನಲ್ಲಿ ಮಗುವಿನ ಆಗಮನವಾಗಲಿದೆ ಎಂಬ ಸುದ್ದಿಯನ್ನು ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ.40 ವರ್ಷದ ಜೆ.ಡಿ.ವ್ಯಾನ್ಸ್ ಮತ್ತು 41 ವರ್ಷದ ಉಷಾ ಈಗಾಗಲೇ ಇವಾನ್, ವಿವೇಕ್ ಮತ್ತು ಮಿರಾಬೆಲ್ ಎಂಬ ಮೂರು ಮಕ್ಕಳ ಪೋಷಕರಾಗಿದ್ದಾರೆ. ಇದೀಗ ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಇಬ್ಬರೂ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.
ಅದ್ಬುತ ಮತ್ತು ಒತ್ತಡದ ಸಮಯದಲ್ಲಿ ನಮ್ಮ ಕುಟುಂಬವನ್ನು ಅತ್ಯುತ್ತಮವಾಗಿ ನೋಡಿಕೊಳ್ಳುತ್ತಿರುವ ಮಿಲಿಟರಿ ವೈದ್ಯರಿಗೆ ಹಾಗೂ ನಮ್ಮ ಮಕ್ಕಳೊಂದಿಗೆ ಅದ್ಭುತ ಜೀವನವನ್ನು ಆನಂದಿಸುತ್ತಾ ದೇಶಕ್ಕೆ ಸೇವೆ ಸಲ್ಲಿಸಲು ಸಾಧ್ಯವಾಗುವಂತೆ ಶ್ರಮಿಸುವ ಸಿಬ್ಬಂದಿ ಸದಸ್ಯರಿಗೆ ನಾವು ವಿಶೇಷವಾಗಿ ಕೃತಜ್ಞರು ಎಂದೂ ಅವರು ಬರೆದುಕೊಂಡಿದ್ದಾರೆ. ಅಮೆರಿಕನ್ನರು ಹೆಚ್ಚಿನ ಮಕ್ಕಳನ್ನು ಹೊಂದಬೇಕು ಎಂದು ಎಂದು ರಿಪಬ್ಲಿಕನ್ ನಾಯಕರು ಪ್ರತಿಪಾದಿಸುತ್ತಿರುವ ನಡುವೆ ಇದೀಗ ರಿಪಬ್ಲಿಕನ್ ಪಕ್ಷದ ಉಪಾಧ್ಯಕ್ಷರ ಕುಟುಂಬ ಬೆಳೆಯುತ್ತಿರುವ ಸುದ್ದಿ ಹೊರಬಿದ್ದಿದೆ. 2021ರಲ್ಲಿ ಓಹಿಯೋದಲ್ಲಿ ಯುಎಸ್ ಸೆನೆಟ್‌ಗೆ ಸ್ಪರ್ಧಿಸುವ ಮೂಲಕ ತಮ್ಮ ರಾಜಕೀಯ ವೃತ್ತಿಜೀವನ ಪ್ರಾರಂಭಿಸಿದ್ದ ವ್ಯಾನ್ಸ್, ತಮ್ಮ ಭಾಷಣದಲ್ಲಿ ದೇಶದಲ್ಲಿ ಜನನ ದರಗಳು ಕುಸಿಯುತ್ತಿರುವ ಕುರಿತು ಕಳವಳ ವ್ಯಕ್ತಪಡಿಸಿ ಮಾತನಾಡಿದ್ದರು. ಈ ದರ ಕುಸಿತ ಅಮೆರಿಕನ್ ಸಮಾಜ ಮತ್ತು ಆರ್ಥಿಕ ಬಲಕ್ಕೆ ದೀರ್ಘಾವಧಿಯ ಅಪಾಯ ಉಂಟುಮಾಡುತ್ತದೆ ಎಂದು ಎಚ್ಚರಿಸಿದ್ದರು.ಉಪಾಧ್ಯಕ್ಷರಾದ ಬಳಿಕವೂ ಈ ವಿಚಾರವನ್ನು ಪ್ರತಿಪಾದಿಸುತ್ತಲೇ ಇದ್ದ ಅವರು, 2025ರ ಮಾರ್ಚ್‌ನಲ್ಲಿ ‘ಫಾರ್ ಲೈಫ್’ ಭಾಷಣದಲ್ಲೂ ಕೂಡ ಅಮೆರಿಕದಲ್ಲಿ ಹೆಚ್ಚಿನ ಮಕ್ಕಳು ಬೇಕು. ಜನರು ಹೆಚ್ಚಿನ ಮಕ್ಕಳು ಹೊಂದಲು ಮುಂದಾಗಬೇಕು ಎಂದು ಕರೆ ಕೊಟ್ಟಿದ್ದರು.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೂ ಕೂಡ ಅಮೆರಿಕನ್ನರು ಹೆಚ್ಚು ಮಕ್ಕಳನ್ನು ಹೊಂದಬೇಕು ಎಂದು ಈ ಹಿಂದೆ ತಮ್ಮ ಭಾಷಣದಲ್ಲಿ ಹೇಳಿದ್ದರು. ವ್ಯಾನ್ಸ್ ಮಗುವಿನ ನಿರೀಕ್ಷೆಯಲ್ಲಿರುವ ಸುದ್ದಿಗೆ ಶ್ವೇತಭವನ ಶುಭ ಕೋರಿದ್ದು, ಟ್ರಂಪ್ ಆಡಳಿತವು ಅತ್ಯಂತ ಕುಟುಂಬ ಪರ ಆಡಳಿತ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ. ಭಾರತ ಮೂಲದ ಉಷಾ ವ್ಯಾನ್ಸ್ ಅವರನ್ನು ವಿವಾಹವಾಗಿರುವ ಜೆ.ಡಿ.ವ್ಯಾನ್ಸ್ ಕಳೆದ ವರ್ಷ ಭಾರತ ಪ್ರವಾಸ ಕೈಗೊಂಡಿದ್ದರು. ರಾಜಸ್ಥಾನದ ಜೈಪುರದಲ್ಲಿ ಇವರ ಮಕ್ಕಳು ಭಾರತೀಯ ಸಾಂಪ್ರದಾಯಿಕ ಉಡುಗೆ ಧರಿಸಿ ಗಮನ ಸೆಳೆದಿದ್ದರು.
