ಉದಯವಾಹಿನಿ, ದಾವೋಸ್: ಅಮೆರಿಕ ಅಧ್ಯಕ್ಷ ಟ್ರಂಪ್ ಹುಚ್ಚಾಟದ ಬೆನ್ನಲ್ಲೇ ಜಗತ್ತಿನ ಬಹುತೇಕ ರಾಷ್ಟ್ರಗಳು ಭಾರತದ ಜೊತೆ ಬಾಂಧವ್ಯಕ್ಕೆ ಮುಂದಾಗಿದೆ. ಅದರಲ್ಲೂ, 27 ದೇಶಗಳನ್ನು ಒಳಗೊಂಡಿರುವ ಯೂರೋಪಿಯನ್ ಒಕ್ಕೂಟವು ಭಾರತದ ಜೊತೆ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಮುಂದಾಗಿವೆ.
ಸ್ವಿಜರ್ಲ್ಯಾಂಡ್‌ನ ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ಮಾತನಾಡಿದ ಯೂರೋಪ್ ಒಕ್ಕೂಟದ ಮುಖ್ಯಸ್ಥೆ ಉರ್ಸುಲಾ ವನ್ ಡರ್ ಲೆಯಾನ್ ಮಾತನಾಡಿ, ಮುಂದಿನ ವಾರಾಂತ್ಯದಲ್ಲಿ ದಾವೋಸ್ ಬಳಿಕ ನಾನು ಭಾರತಕ್ಕೆ ಪ್ರಯಾಣಿಸುತ್ತೇನೆ. ಇನ್ನೂ ಮಾಡಲು ಕೆಲಸವಿದೆ, ಆದರೆ ನಾವು ಐತಿಹಾಸಿಕ ವ್ಯಾಪಾರ ಒಪ್ಪಂದ ಮಾಡುವ ಅಂತಿಮ ಹಂತದಲ್ಲಿದ್ದೇವೆ. ಇದನ್ನು ಕೆಲವರು ಎಲ್ಲಾ ಒಪ್ಪಂದಗಳ ತಾಯಿ ಎಂದು ಕರೆಯುತ್ತಾರೆ ಎಂದು ಬಣ್ಣಿಸಿದರು.
ಒಪ್ಪಂದವು ಸುಮಾರು ಎರಡು ಶತಕೋಟಿ ಜನರ ಸಂಯೋಜಿತ ಮಾರುಕಟ್ಟೆಯನ್ನು ಸೃಷ್ಟಿಸುತ್ತದೆ ಮತ್ತು ಜಾಗತಿಕ ಜಿಡಿಪಿಯ ಸುಮಾರು ಕಾಲು ಭಾಗದಷ್ಟು ಪಾಲನ್ನು ಹೊಂದಿರುತ್ತದೆ. ಇದು ಯುರೋಪಿಯನ್ ಕಂಪನಿಗಳಿಗೆ ವಿಶ್ವದ ವೇಗವಾಗಿ ಬೆಳೆಯುತ್ತಿರುವ ಪ್ರದೇಶಗಳಲ್ಲಿ ಹೂಡಿಕೆಗೆ ಸಹಾಯ ಮಾಡಲಿದೆ. ಯುರೋಪ್ ಲ್ಯಾಟಿನ್ ಅಮೆರಿಕದಿಂದ ಹಿಡಿದು ಇಂಡೋ-ಪೆಸಿಫಿಕ್ ಮತ್ತು ಅದರಾಚೆಗಿನವರೆಗೆ ವ್ಯವಹಾರ ಮಾಡಲು ಬಯಸುತ್ತದೆ ಎಂದು ಹೇಳಿದರು.
