ಉದಯವಾಹಿನಿ, ಜಪಾನ್‌ನ ಅತಿ ಹೆಚ್ಚು ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದ ಧೀಮಂತ ನಾಯಕ ಶಿಂಜೋ ಅಬೆ ಅವರ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಅಲ್ಲಿನ ನ್ಯಾಯಾಲಯವು ಮಹತ್ವದ ತೀರ್ಪು ನೀಡಿದೆ. ಆರೋಪಿ ಟೆಟ್ಟುಯಾ ಯಮಗಾಮಿ (41) ಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ಬುಧವಾರ ಆದೇಶ ಹೊರಡಿಸಿದೆ.
ಜುಲೈ 8, 2022 ರಂದು ಜಪಾನ್‌ನ ನಾರಾ ನಗರದಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡುತ್ತಿದ್ದಾಗ, ಟಿಟ್ಟುಯಾ ಯಮಗಾಮಿ ಎಂಬಾತ ಅಬೆ ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದ. ದಾಳಿಯ ತೀವ್ರತೆಗೆ ರಕ್ತಸ್ರಾವವಾಗಿ ಕುಸಿದು ಬಿದ್ದ ಅಬೆ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದರು. ಇದು ದಶಕಗಳ ಕಾಲ ಶಾಂತಿಯುತವಾಗಿದ್ದ ಜಪಾನ್ ದೇಶವನ್ನೇ ಬೆಚ್ಚಿಬೀಳಿಸಿದ ರಾಜಕೀಯ ಹತ್ಯೆಯಾಗಿತ್ತು.
ವಿಚಾರಣೆಯ ವೇಳೆ ಹಂತಕ ಟೆಟ್ಟುಯಾ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ಆತನ ತಾಯಿ ‘ಯೂನಿಫಿಕೇಶನ್ ಚರ್ಚ್’ ಎಂಬ ಸಂಘಟನೆಗೆ ದೊಡ್ಡ ಮೊತ್ತದ ದೇಣಿಗೆ ನೀಡಿ ತನ್ನ ಕುಟುಂಬವನ್ನು ಬೀದಿಗೆ ತಂದಿದ್ದಳು ಎಂಬ ದ್ವೇಷ ಆತನಲ್ಲಿತ್ತು. ಶಿಂಜೋ ಅಬೆ ಅವರು ಈ ಸಂಘಟನೆಯನ್ನು ಬೆಂಬಲಿಸುತ್ತಿದ್ದಾರೆ ಎಂದು ಭಾವಿಸಿದ ಹಂತಕ, ಸೇಡಿನ ಉನ್ಮಾದದಲ್ಲಿ ಈ ಕೃತ್ಯ ಎಸಗಿದ್ದಾಗಿ ತಿಳಿಸಿದ್ದಾನೆ. ವಿಶೇಷವಾಗಿ ಅಬೆ ಅವರು ಈ ಸಂಘಟನೆಗೆ ನೀಡಿದ್ದ ಒಂದು ವಿಡಿಯೋ ಸಂದೇಶವೇ ತನ್ನ ದಾಳಿಗೆ ಪ್ರಚೋದನೆ ನೀಡಿತು ಎಂದು ಆತ ಕೋರ್ಟ್‌ನಲ್ಲಿ ಹೇಳಿಕೊಂಡಿದ್ದ. ಶಿಂಜೋ ಅಬೆ ಅವರು 2006-2007 ಮತ್ತು 2012-2020 ರವರೆಗೆ ಎರಡು ಅವಧಿಗಳಲ್ಲಿ ಜಪಾನ್ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು. ಜಪಾನ್‌ನ ಆರ್ಥಿಕತೆ ಮತ್ತು ವಿದೇಶಾಂಗ ನೀತಿಯನ್ನು ಬಲಪಡಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಪ್ರಧಾನಿ ಹುದ್ದೆಯಿಂದ ಕೆಳಗಿಳಿದ ನಂತರವೂ ಅವರು ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದರು.
ಈಗ ನ್ಯಾಯಾಲಯವು ನೀಡಿರುವ ಜೀವಾವಧಿ ಶಿಕ್ಷೆಯು ಜಪಾನ್ ಇತಿಹಾಸದ ಕಪ್ಪು ಚುಕ್ಕೆಯಂತಿರುವ ಈ ಹತ್ಯಾ ಪ್ರಕರಣಕ್ಕೆ ನ್ಯಾಯ ಒದಗಿಸಿದಂತಾಗಿದೆ.

Leave a Reply

Your email address will not be published. Required fields are marked *

error: Content is protected !!