ಉದಯವಾಹಿನಿ, ಭಾರತದ ಶಕ್ಸ್‌ಗಮ್ ಕಣಿವೆಯ ಮೇಲೆ ಪ್ರಾದೇಶಿಕ ಹಕ್ಕನ್ನು ಪ್ರತಿಪಾದಿಸಲು ಚೀನಾ ಮತ್ತೊಮ್ಮೆ ಪ್ರಯತ್ನಿಸಿದೆ. ಪಾಕಿಸ್ತಾನದೊಂದಿಗೆ ಸಹಿ ಮಾಡಲಾದ ಭಾರತದ ದಶಕಗಳಷ್ಟು ಹಳೆಯದಾದ ಗಡಿ ಒಪ್ಪಂದವನ್ನು ಚೀನಾ ಮತ್ತೆ ಪ್ರಚೋದಿಸುತ್ತಿದೆ. ಈ ಒಪ್ಪಂದವನ್ನು ಭಾರತ ನಿರಂತರವಾಗಿ ಅಮಾನ್ಯವೆಂದು ತಿರಸ್ಕರಿಸಿದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಮತ್ತು ಭಾರತ, ಚೀನಾ, ಪಾಕಿಸ್ತಾನದ ನಡುವಿನ ದೀರ್ಘಕಾಲದ ವಿವಾದದ ಅಂಶವಾಗಿ ಉಳಿದಿರುವ ಶಕ್ಸ್‌ಗಮ್ ಕಣಿವೆ ಪ್ರದೇಶದಲ್ಲಿ ಚೀನಾದ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಿಗೆ ಭಾರತದ ಆಕ್ಷೇಪಣೆಗಳ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ. ಹಾಗಿದ್ರೆ ಶಕ್ಸ್‌ಗಮ್ ಕಣಿವೆ ವಿವಾದವೇನು? ಭಾರತ ಕಳವಳ ಏಕೆ? ಚೀನಾದ ಪ್ರತಿಪಾದನೆ ಏನು ಎಂಬ ಕುರಿತು ಇಲ್ಲಿ ವಿವರಿಸಲಾಗಿದೆ.
ಶಕ್ಸ್‌ಗಮ್ ಕಣಿವೆ ಎಲ್ಲಿದೆ?: ಶಕ್ಸ್‌ಗಮ್ ಕಣಿವೆಯನ್ನು ಟ್ರಾನ್ಸ್ ಕಾರಕೋರಂ ಟ್ರ್ಯಾಕ್ಟ್ ಎಂದೂ ಕರೆಯಲಾಗುತ್ತದೆ. ಇದು ಕಾರಕೋರಂ ಶ್ರೇಣಿಯ ಉತ್ತರಕ್ಕೆ ಇರುವ ದೂರದ, ಎತ್ತರದ ಕಣಿವೆಯಾಗಿದೆ. ಶಕ್ಸ್‌ಗಮ್ ಕಣಿವೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ) ಹುಂಜಾ-ಗಿಲ್ಗಿಟ್ ಪ್ರದೇಶದಲ್ಲಿದೆ. ಇದು ವಿವಾದಿತ ಪ್ರದೇಶವಾಗಿದೆ. ಈ ಸೂಕ್ಷ್ಮ ಪ್ರದೇಶವು ಭಾರತಕ್ಕೆ ಸೇರಿದ್ದು ಎಂದು ಭಾರತ ಪ್ರತಿಪಾದಿಸಿದೆ. 1963ರಲ್ಲಿ ಪಾಕಿಸ್ತಾನವು 2 ರಾಷ್ಟ್ರಗಳ ನಡುವಿನ ಗಡಿ ವಿವಾದಗಳನ್ನು ಪರಿಹರಿಸುವ ಗುರಿಯನ್ನು ಹೊಂದಿರುವ ‘ಗಡಿ ಒಪ್ಪಂದ’ದ ಭಾಗವಾಗಿ ಶಕ್ಸ್‌ಗಮ್ ಕಣಿವೆಯನ್ನು ಚೀನಾಗೆ ಬಿಟ್ಟುಕೊಟ್ಟಿತು.
ಶಕ್ಸ್‌ಗಮ್ ಕಣಿವೆಯು ಉತ್ತರಕ್ಕೆ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ (PRC) ಕ್ಸಿನ್‌ಜಿಯಾಂಗ್ ಪ್ರಾಂತ್ಯದೊಂದಿಗೆ, ದಕ್ಷಿಣ ಮತ್ತು ಪಶ್ಚಿಮಕ್ಕೆ ಪಾಕ್ ಆಕ್ರಮಿತ ಕಾಶ್ಮೀರದ ಉತ್ತರ ಪ್ರದೇಶಗಳೊಂದಿಗೆ ಮತ್ತು ಪೂರ್ವಕ್ಕೆ ಸಿಯಾಚಿನ್ ಹಿಮನದಿ ಪ್ರದೇಶದೊಂದಿಗೆ ಗಡಿಗಳನ್ನು ಹಂಚಿಕೊಂಡಿದೆ. ಶಕ್ಸ್‌ಗಮ್ ಕಣಿವೆಯನ್ನು ಪ್ರಸ್ತುತ ಚೀನಾವು ಕ್ಸಿನ್‌ಜಿಯಾಂಗ್‌ನ ಭಾಗವಾಗಿ ನಿರ್ವಹಿಸುತ್ತಿದೆ. ಆದರೆ, ಶಕ್ಸ್‌ಗಮ್ ಕಣಿವೆಯು ಹಿಂದಿನ ರಾಜಪ್ರಭುತ್ವದ ರಾಜ್ಯವಾದ ಜಮ್ಮು ಮತ್ತು ಕಾಶ್ಮೀರದ (ಈಗ ಲಡಾಖ್) ಭಾಗವಾಗಿದೆ ಎಂದು ಭಾರತ ಪದೇಪದೆ ಪ್ರತಿಪಾದಿಸುತ್ತಿದೆ. 1947- 1948ರ ಯುದ್ಧದ ಸಮಯದಲ್ಲಿ ಪಾಕಿಸ್ತಾನವು ಈ ಪ್ರದೇಶದ ಮೇಲೆ ಹಿಡಿತ ಸಾಧಿಸಿತು. ನಂತರ 1963ರ ಚೀನಾ-ಪಾಕಿಸ್ತಾನ ಒಪ್ಪಂದದ ಅಡಿಯಲ್ಲಿ ಅದನ್ನು ಚೀನಾಕ್ಕೆ ವರ್ಗಾಯಿಸಿತು.
