ಉದಯವಾಹಿನಿ,ಬೆಂಗಳೂರು : ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದಂದು ಅಪರಚಿತನೊಬ್ಬ ಬ್ಯಾರಿಕೇಡ್ ಹಾರಿ ಮುಖ್ಯಮಂತ್ರಿ ಸೇರಿದಂತೆ ಗಣ್ಯರಿದ್ದ ವೇದಿಕೆಯತ್ತ ನುಗ್ಗಿದ್ದು, ಭಾರಿ ಆತಂಕ ಮೂಡಿಸಿದ್ದು, ಭದ್ರತಾ ವ್ಯವಸ್ಥೆಗೆ ಸವಾಲೊಡ್ಡಿತ್ತು.
ವಿಧಾನಸೌಧದ ಪೂರ್ವದ್ವಾರದಲ್ಲಿನ ಮೆಟ್ಟಿಲುಗಳ ಮೇಲೆ ಕಾರ್ಯಕ್ರಮಕ್ಕಾಗಿ ಬೃಹತ್ ವೇದಿಕೆಯನ್ನು ನಿರ್ಮಿಸಲಾಗಿತ್ತು. ಸಾಕಷ್ಟು ಭದ್ರತೆಯನ್ನು ಆಯೋಜಿಸಲಾಗಿತ್ತು. ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಭಾಷಣ ಮಾಡುತ್ತಿದ್ದರು. ಈ ವೇಳೆ ಆಕಾಶನೀಲಿ ಅಂಗಿ ಹಾಗೂ ಕಾಖಿ ಬಣ್ಣದ ಪ್ಯಾಂಟ್ ಧರಿಸಿದ್ದ ವ್ಯಕ್ತಿಯೊಬ್ಬ ಕನ್ನಡದ ಶಾಲು ಧರಿಸಿಕೊಂಡಿದ್ದು, ಸಾರ್ವಜನಿಕರ ಗ್ಯಾಲರಿಯಿಂದ ಏಕಾಏಕಿ ವೇದಿಕೆಯತ್ತ ನುಗ್ಗಿದ್ದಲ್ಲದೆ, ಎತ್ತರದ ವೇದಿಕೆ ಏರಲು ನೆಗೆದಿದ್ದಾನೆ. ತಕ್ಷಣವೇ ಎಚ್ಚೆತ್ತುಕೊಂಡು ಅಂಗರಕ್ಷಕರು ವೇದಿಕೆ ಯಲ್ಲಿದ್ದ ಗಣ್ಯರ ಬಳಿ ಬರಲು ಸಾಧ್ಯವಾಗದಂತೆ ಅಪರಿಚಿತ ವ್ಯಕ್ತಿಯನ್ನು ಆರಂಭದಲ್ಲೇ ನಿರ್ಬಂಧಿಸಿದ್ದಾರೆ.ಈ ಹಂತದಲ್ಲಿ ವ್ಯಕ್ತಿ ತನ್ನ ಕೈಯಲ್ಲಿದ್ದ ಶಾಲನ್ನು ಮುಖ್ಯಮಂತ್ರಿ ಸಿದ್ದರಾಮಯ, ವಿಧಾನಸಭಾ ಸಭಾಪತಿ ಬಸವರಾಜ ಹೊರಟ್ಟಿ, ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ, ಸಚಿವರುಗಳಾದ ಪ್ರಿಯಾಂಕ್ ಖರ್ಗೆ, ಕೆ.ಜೆ.ಜಾರ್ಜ್, ದಿನೇಶ್ ಗುಂಡೂರಾವ್ ಅವರುಗಳ ಕಡೆಗೆ ಎಸೆದಿದ್ದಾನೆ. ಅದನ್ನು ವೇದಿಕೆಯಲ್ಲಿದ್ದ ಕೆಲವು ಅಧಿಕಾರಿಗಳು ತಡೆದಿದ್ದಾರೆ.
ಏಕಾಏಕಿ ಅಪರಿಚಿತ ವ್ಯಕ್ತಿ ನುಗ್ಗಿಬಂದಿದ್ದು, ಒಂದು ಕ್ಷಣ ಆಘಾತಕಾರಿಯಾಗಿ ಗಲಿಬಿಲಿ ಮೂಡಿಸಿದೆ. ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವೇದಿಕೆಯಲ್ಲಿ ಯಾವುದೋ ಕಾಗದಪತ್ರವನ್ನು ಗಮನಿಸುತ್ತಿದ್ದರು. ಹೀಗಾಗಿ ಅವರು ವೇದಿಕೆಯತ್ತ ನುಗ್ಗಿಬಂದ ವ್ಯಕ್ತಿಯನ್ನು ಗುರುತಿಸಲು ಸಮಯ ಬೇಕಾಯಿತು. ಉಳಿದಂತೆ ಕೆಲವರು ಆತಂಕದಿಂದ ದಿಢೀರನೇ ಮೇಲೆ ಎದ್ದು ನಿಂತಿದ್ದರು.
