ಉದಯವಾಹಿನಿ,ಯಾದಗಿರಿ: ದಶಕದ ಹಿಂದೆ ಕಲಬುರಗಿಯಲ್ಲಿ ನಡೆದ ರಾಜ್ಯ ಸಚಿವ ಸಂಪುಟದಲ್ಲಿ ಜಿಲ್ಲೆಯಾಗಿ ಘೋಷಣೆಯಾಗಿದ್ದ ಯಾದಗಿರಿಗೆ ಈ ಬಾರಿ ನಿರೀಕ್ಷೆಗಳ ‘ಭಾರ’ಹೆಚ್ಚಿದ್ದು, ಪ್ರಸ್ತಾವನೆಗೆ ಸಿಗುವುದೇ ಮನ್ನಣೆ ಸಿಗುವುದೇ ಕಾದು ನೋಡಬೇಕಿದೆ.
ಕಲಬುರಗಿ ಜಿಲ್ಲೆಯಲ್ಲಿ ಸೆಪ್ಟೆಂಬರ್ 17ರಂದು ನಡೆಯುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಜಿಲ್ಲೆಗೆ ವಿವಿಧ ಇಲಾಖೆಗಳ ಪ್ರಸ್ತಾವನೆಗಳನ್ನು ಸಲ್ಲಿಸಲಾಗಿದೆ.ಆದರೆ, ಇವುಗಳು ಮನ್ನಣೆಗೆ ಸಿಕ್ಕು ಜಾರಿಗೆ ಬರಲಿದೆಯಾ ಎನ್ನುವುದು ಪ್ರಶ್ನೆಯಾಗಿ ಕಾಡುತ್ತದೆ.
ಜಿಲ್ಲೆಯಾಗಿ 14 ವರ್ಷಗಳಾಗಿದ್ದರೂ ಸೂಕ್ತ ಅಭಿವೃದ್ಧಿ ಆಗಿಲ್ಲ. ಕೃಷ್ಣಾ ಮತ್ತು ಭೀಮಾ ನದಿ ಹರಿಯುತ್ತಿದ್ದರೂ ಸಮರ್ಪಕ ನೀರಾವರಿ ಸೌಲಭ್ಯ ಸಿಕ್ಕಿಲ್ಲ. ಅಲ್ಲದೇ ಹೊಸ ತಾಲ್ಲೂಕುಗಳಲ್ಲಿ ಘೋಷಣೆಗಿರುವ ಕಾಳಜಿ ನಿರ್ಮಾಣಕ್ಕಿಲ್ಲದಾಗಿದೆ. ಇಂದಿಗೂ ಹಲವಾರು ಇಲಾಖೆಗಳು ಹಳೆ ಕಚೇರಿಯಿಂದಲೇ ನಡೆಯುತ್ತಿವೆ. ಇದು ಕೂಡ ಆಡಳಿತ ತೊಡಕಿಗೆ ಕಾರಣವಾಗಿದೆ. ನೂತನ ಜಿಲ್ಲೆಗೆ ಬೇಕಿದೆ ಪ್ಯಾಕೇಜ್‌ ಅನುದಾನ ಬರಲಿದೆ ಎನ್ನುವುದು ಜಿಲ್ಲೆಯ ಜನತೆಯ ಆಶಯವಾಗಿದೆ.

ಮೂರು ನಗರಸಭೆ, ಮೂರು ಪುರಸಭೆ, ಒಂದು ಪಟ್ಟಣ ಪಂಚಾಯಿತಿ ಇದ್ದು, ಆರು ತಾಲ್ಲೂಕುಗಳಿವೆ. ಆದರೆ, ಇಂದಿಗೂ ಮೂಲಸೌಲಭ್ಯಗಳಿಂದ ಜಿಲ್ಲಾ ಕೇಂದ್ರ ಹಿಡಿದು ಎಲ್ಲ ಕಡೆ ಅದೇ ಪರಿಸ್ಥಿತಿ ಇದೆ.ಕಾಲುವೆ ಜಾಲ ಇರುವ ಕಾರಣ ಐದು ತಾಲ್ಲೂಕುಗಳಲ್ಲಿ ನೀರಾವರಿ ಸೌಲಭ್ಯ ಇದ್ದು, ಗುರುಮಠಕಲ್‌ ಮಳೆಯಾಶ್ರಿತ ಪ್ರದೇಶವಿದೆ. ಕೆರೆ ತುಂಬಿಸುವ ಯೋಜನೆ ಪೂರ್ಣ ಪ್ರಮಾಣದಲ್ಲಿ ನಡೆಯುತ್ತಿಲ್ಲ. ಶಿಕ್ಷಣ, ಸಾರಿಗೆ, ಆರೋಗ್ಯ ಇಲಾಖೆಗಳಲ್ಲಿ ಯಾವುದೇ ಸೌಲಭ್ಯಗಳಿಲ್ಲದೆ ಸೊರಗಿ ಹೋಗಿವೆ. ಹಲವಾರು ಕ್ಷೇತ್ರಗಳಲ್ಲಿ ಸಿಬ್ಬಂದಿ ಕೊರತೆ ಎದ್ದು ಕಾಣುತ್ತಿದೆ. 2017ರ ನಂತರ ಜಿಲ್ಲೆಯಲ್ಲಿ ಹೊಸ ತಾಲ್ಲೂಕುಗಳನ್ನು ಘೋಷಣೆ ಮಾಡಲಾಗಿದೆ. ಯಾದಗಿರಿ ತಾಲ್ಲೂಕಿನಿಂದ ಗುರುಮಠಕಲ್‌, ಶಹಾಪುರ ತಾಲ್ಲೂಕಿನಿಂದ ವಡಗೇರಾ ಹಾಗೂ ಸುರಪುರ ತಾಲ್ಲೂಕಿನಿಂದ ಹುಣಸಗಿ ತಾಲ್ಲೂಕುಗಳನ್ನು ಹೊಸದಾಗಿ ನಿರ್ಮಿಸಲಾಗಿದೆ. ಆದರೆ, ಅವುಗಳಿಗೆ ಮೂಲಸೌಕರ್ಯ ಒದಗಿಸುವ ಭರವಸೆಗಳು ಮಾತ್ರ ಘೋಷಣೆಗೆ ಸೀಮಿತವಾಗಿದೆ.

Leave a Reply

Your email address will not be published. Required fields are marked *

error: Content is protected !!