ಉದಯವಾಹಿನಿ, ಬೆಂಗಳೂರು : ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ದಿನದಿಂದ ದಿನಕ್ಕೆ ಬಡವರು ಹಾಗೂ ಮಧ್ಯಮವರ್ಗದವರ ಜೀವನ ಬಲು ದುಬಾರಿಯಾಗುತ್ತಿದ್ದು, ಈ ನಡುವೆ ಈರುಳ್ಳಿ ಬೆಲೆ ಏರಿಕೆಯಾಗುತ್ತಲೇ ಹೋಗುತ್ತಿದ್ದು, ಗ್ರಾಹಕರ ಕಣ್ಣಲ್ಲಿ ಕೊಳ್ಳುವಾಗಲೇ ನೀರು ತರಿಸುತ್ತಿದೆ.

ಈರುಳ್ಳಿಯನ್ನು ವ್ಯಾಪಕವಾಗಿ ಬೆಳೆಯುವ ಉತ್ತರಕರ್ನಾಟಕದ ಹಲವು ಭಾಗಗಳಲ್ಲಿ ಅತಿಯಾದ ಮಳೆಯಾದ ಕಾರಣ ಬೆಳೆಯೆಲ್ಲಾ ನಾಶವಾಗಿದ್ದು, ಮತ್ತೊಂದೆಡೆ ತೇವಾಂಶಕ್ಕೆ ಸಂಗ್ರಹಿಸಿಟ್ಟಿದ್ದ ಈರುಳ್ಳಿ ಇಟ್ಟಲ್ಲೇ ಕೊಳೆತುಹೋಗುತ್ತಿದೆ. ಹಾಗಾಗಿ ಉತ್ಪಾದನೆ ಕುಂಠಿತವಾಗಿದ್ದು, ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ದಿನದಿಂದ ದಿನಕ್ಕೆ ಬೆಲೆ ಏರುತ್ತಲೇ ಇದೆ.
ಕಳೆದ ಕೆಲವು ತಿಂಗಳ ಹಿಂದೆ 100 ರೂ.ಗೆ ನಾಲ್ಕು ಕೆಜಿ ಗುಣಮಟ್ಟದ ಈರುಳ್ಳಿ ಚಿಲ್ಲರೆಯಾಗಿ ಮಾರಾಟವಾಗುತ್ತಿತ್ತು. ಈಗ ಕೆಜಿಗೆ 60 ರಿಂದ 70 ರೂ.ಗೆ ಮಾರಾಟವಾಗುತ್ತಿದೆ. ಉತ್ತರಕರ್ನಾಟಕದ ಬಳ್ಳಾರಿ, ರಾಯಚೂರು, ಬೆಳಗಾವಿ, ಹುಬ್ಬಳ್ಳಿ, ಧಾರವಾಡ ಭಾಗಗಳಲ್ಲಿ ಹೆಚ್ಚಾಗಿ ಈರುಳ್ಳಿ ಬೆಳೆ ಬೆಳೆಯಲಾಗುತ್ತದೆ. ಆದರೆ ಹೆಚ್ಚಾದ ಮಳೆಯಿಂದ ಬೆಳೆ ನಾಶವಾಗಿ ಉತ್ಪಾದನೆಯಲ್ಲಿ ಭಾರೀ ಕುಸಿತವಾಗಿದೆ.
ಈ ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ನಿಗಧಿತ ಪ್ರಮಾಣದಲ್ಲಿ ಮಾಲು ಬರುತ್ತಿಲ್ಲ. ಪೂರೈಕೆ ಕೂಡ ಕಡಿಮೆಯಾಗಿದ್ದು, ನೆರೆಯ ಮಹಾರಾಷ್ಟ್ರ, ಪುಣೆಯಿಂದಲೂ ಸಹ ಈರುಳ್ಳಿಯನ್ನು ಆಮದು ಮಾಡಿಕೊಳ್ಳಲಾಗುತ್ತಿದೆ.ಪಿತೃಪಕ್ಷ ಹಾಗೂ ದಸರಾ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮತ್ತಷ್ಟು ದುಬಾರಿಯಾಗುವ ಸಾಧ್ಯತೆಯಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!