ಉದಯವಾಹಿನಿ, ಬೆಂಗಳೂರು: ಬಿಬಿಎಂಪಿ ಗುತ್ತಿಗೆ ದಾರರಿಗೆ ಜಾತಿ ನಿಂದನೆ, ಪ್ರಾಣ ಬೆದರಿಕೆ ಹಾಕಿದ ಆರೋಪದಲ್ಲಿ ಪರಪ್ಪನ ಅಗ್ರಹಾರ ಜೈಲು ಪಾಲಾಗಿರುವ ರಾಜರಾಜೇಶ್ವರಿನಗರ ಕ್ಷೇತ್ರದ ಶಾಸಕ ಮುನಿರತ್ನ ನಾಯ್ಡು ಜಾಮೀನು ಭವಿಷ್ಯ ನಾಳೆ ನಿರ್ಧಾರವಾಗಲಿದೆ.
ಮುನಿರತ್ನ ಪ್ರಕರಣದ ವಾದ-ಪ್ರತಿವಾದವನ್ನು ಆಲಿಸಿದ ಬೆಂಗಳೂರಿನ 82ನೇ ಎಸಿಸಿಎಂ ನ್ಯಾಯಾಲಯದ ನ್ಯಾಯಮೂರ್ತಿ ಸಂತೋಷ್ ಗಜಾನನ ಭಟ್ ಅವರು ತೀರ್ಪನ್ನು ನಾಳೆಗೆ ಕಾಯ್ದಿರಿಸಿದ್ದಾರೆ. ನ್ಯಾಯಾಲಯ ನೀಡುವ ತೀರ್ಪಿನ ಮೇಲೆ ಮುನಿರತ್ನ ಬಿಡುಗಡೆ ಭವಿಷ್ಯ ನಿರ್ಧಾರವಾಗಲಿದೆ.
ಇದಕ್ಕೂ ಮುನ್ನ ಶಾಸಕ ಮುನಿರತ್ನ ಪರ ಹಿರಿಯ ವಕೀಲ ಅಶೋಕ್ ಹಾರನಹಳ್ಳಿ ಹಾಗೂ ಸರ್ಕಾರದ ಪರ ವಿಶೇಷ ಸಾರ್ವಜನಿಕ ಅಭಿಯೋಜಕ(ಎಸ್ಪಿಪಿ) ಪ್ರದೀಪ್ ಪ್ರಬಲ ವಾದ ಮಂಡಿಸಿದರು.ಮೊದಲು ಮುನಿರತ್ನ ಪರ ವಾದ ಮಂಡಿಸಿದ ಅಶೋಕ್ ಹಾರನಹಳ್ಳಿಯವರು, ಪೊಲೀಸರು ತಮ ಕಕ್ಷಿದಾರರಿಗೆ ಕನಿಷ್ಟ ನೋಟಿಸ್ ಕೊಡದೆ ಬಂಧಿಸಿದ್ದಾರೆ. ಅಷ್ಟಕ್ಕೂ ಅವರೇನು ದೇಶಬಿಟ್ಟು ಹೋಗುತ್ತಿರಲಿಲ್ಲ. ವಿಚಾರಣೆಗೆ ಬರುವಂತೆ ಸೂಚಿಸಿದ್ದರೆ ಹಾಜರಾಗುತ್ತಿದ್ದರು. ಪೊಲೀಸರು ಆತುರದಲ್ಲಿ ಬಂಧಿಸಿದ್ದಾರೆಂದು ವಾದಿಸಿದರು.
ಈ ಪ್ರಕರಣ ನಡೆದಿರುವುದು ಶಾಸಕರ ಕಚೇರಿಯಲ್ಲಿ ಸಾರ್ವಜನಿಕವಾಗಿ ಯಾವುದೇ ಒಬ್ಬ ವ್ಯಕ್ತಿಯನ್ನು ನಿಂದಿಸುವುದು, ಉದ್ದೇಶಪೂರ್ವಕವಾಗಿ ಅಪಮಾನ ಮಾಡುವುದು ಕಂಡುಬಂದರೆ ಜಾತಿ ನಿಂದನೆ ಪ್ರಕರಣ ದಾಖಲಿಸಬಹುದು. ಕಚೇರಿಯೊಳಗೆ ನಡೆದಿರುವ ಸಂಭಾಷಣೆ ಆಧಾರದ ಮೇಲೆ ಪ್ರಕರಣ ದಾಖಲಿಸಿರುವುದು ಸರಿಯಲ್ಲ ಎಂದು ನ್ಯಾಯಮೂರ್ತಿಗಳ ಗಮನಕ್ಕೆ ತಂದರು.
