ಉದಯವಾಹಿನಿ, ಕೋಲಾರ: ತಾಲೂಕಿನ ವಕ್ಕಲೇರಿ ಹೋಬಳಿಯ ಅರಾಭಿಕೊತ್ತನೂರು ಗ್ರಾಮ ಪಂಚಾಯತಿಯ ಗುಟ್ಟಹಳ್ಳಿ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಆಟದ ಮೈದಾನಕ್ಕೆ ಸ್ಥಳವನ್ನು ಒದಗಿಸಿಕೊಡುವ ಮೂಲಕ ಶಾಲಾ ಮಕ್ಕಳ ದೈಹಿಕ ಬೆಳವಣಿಗೆಗೆ ಸಹಕರಿಸಬೇಕೆಂದು ಗ್ರಾಮಸ್ಥರ ಪರವಾಗಿ ಗ್ರಾಮ ಪಂಚಾಯತಿ ಸದಸ್ಯ ನಂದೀಶ್ ಹೆಚ್ ಸಂಬಂಧಪಟ್ಟ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.
ಈ ಶಾಲೆಯಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗದ ೯೦ ಮಕ್ಕಳು ೧ ರಿಮದ ೭ನೇ ತರಗತಿಯವರೆಗೆ ಕಲಿಯುತ್ತಿದ್ದಾರೆ. ಮಕ್ಕಳು ಆಟ ಆಡಲು ಮೈದಾನವಿಲ್ಲ, ಹೋಬಳಿ ಮತ್ತು ತಾಲೂಕು ಕ್ರೀಡಾಕೂಟಗಳ ಸಮಯದಲ್ಲಿ ಶಿಕ್ಷಕರು ಮಕ್ಕಳನ್ನು ಗ್ರಾಮದ ಖಾಸಗಿ ಜಮೀನುಗಳಿಗೆ ಕೆರದುಕೊಂಡು ಹೋಗಿ ಆಟ ಆಡಿಸುವಂತಾಗಿದೆ.
ಮಕ್ಕಳಿಗೆ ಪಾಠದ ಜೊತೆಗೆ ಕ್ರೀಡೆಗಳು ಬಹಳ ಮುಖ್ಯ. ಆಟ-ಪಾಠ ಒಂದೇ ನಾಟ್ಯದ ಎರಡು ಮುಖಗಳು ಇದ್ದ ಹಾಗೆ. ಆದರೆ ಮಕ್ಕಳಿಗೆ ಮೈದಾನವಿಲ್ಲ. ಆಟ ಆಡಿಸಲು ಸಾಧ್ಯವಿಲ್ಲದಿರುವುದರಿಂದ ಆಟಗಳ ಬಗ್ಗೆ ಎನೂ ಗೊತ್ತಿಲ್ಲದಂತಾಗಿದೆ. ಆಟದ ಮೈದಾನದ ವಿಚಾರವಾಗಿ ಶಾಲಾಭಿವೃದ್ಧಿ ಸಮಿತಿ ಮತ್ತು ಮೇಲುಸ್ತುವಾರಿ ಸಮಿತಿ, ಗ್ರಾಮಸ್ಥರು ಗ್ರಾಮ ಪಂಚಾಯತಿ ಸದಸ್ಯ ನಂದೀಶ್ ಅವರ ನೇತೃತ್ವದಲ್ಲಿ ದಿನಾಂಕ ೧೮-೦೮-೨೦೨೧ ರಲ್ಲಿ ಪಿಡಿಓ ಅವರಿಗೆ ಮತ್ತು ೧೦-೦೨-೨೦೨೩ ಗುಟ್ಟಹಳ್ಳಿ ಗ್ರಾಮದ ಸರ್ವೇ ನಂ. ೪ ರಲ್ಲಿ ೧ ಎಕರೆ ಸರ್ಕಾರಿ ಖರಾಬು ಇದ್ದು, ಆಟದ ಮೈದಾನಕ್ಕೆ ಒದಗಿಸಿಕೊಡುವಂತೆ ತಹಸೀಲ್ದಾರ್‌ಗೂ ಮನವಿ ಸಲ್ಲಿಸಲಾಗಿದೆ. ಆದರೆ ಇದುವರೆಗೂ ತಹಸೀಲ್ದಾರ್ ಯಾವುದೇ ಕ್ರಮ ವಹಿಸಿಲ್ಲ ಎಂದು ದೂರಿದರು.
ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಶಾಲೆಗ ಆಟದ ಮೈದಾನ ಒದಗಿಸಿಕೊಡುವ ಮೂಲಕ ಮಕ್ಕಳ ದೈಹಿಕ ಬೆಳವಣಿಗೆಗೆ ಸಹಕರಿಸಬೇಕೆಂದು ಆಗ್ರಹಿಸಿದ್ದಾರೆ.
