ಉದಯವಾಹಿನಿ, ಸಿರಿಗೆರೆ: ಕರ್ನಾಟಕದ ಮಠ ಪರಂಪರೆಯಲ್ಲಿ ಬಹುಮುಖ್ಯ ಧಾರ್ಮಿಕ ಕೇಂದ್ರವಾಗಿರುವ ಸಿರಿಗೆರೆಯ ತರಳಬಾಳು ಬೃಹನ್ಮಠಕ್ಕೆ 8 ಶತಮಾನಗಳಷ್ಟು ಹಳೆಯದಾದ ಇತಿಹಾಸವಿದೆ. ಮಠವನ್ನು ಉತ್ತುಂಗಕ್ಕೆ ಕೊಂಡೊಯ್ದ ಕೀರ್ತಿ ಈ ಪೀಠದ 20ನೇ ಜಗದ್ಗುರು ತರಳಬಾಳು ಶಿವಕುಮಾರ ಶಿವಾಚಾರ್ಯರಿಗೆ ಸಲ್ಲುತ್ತದೆ.
1914ರ ಬಸವ ಜಯಂತಿಯಂದು ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಮುತ್ತುಗದೂರು ಗ್ರಾಮದಲ್ಲಿ ಜನಿಸಿದ ಶ್ರೀಗಳು ಸಂಸ್ಕೃತದಲ್ಲಿ ಕಾವ್ಯ ರಚಿಸುವ ಮೇಧಾವಿತನವನ್ನು ವಿದ್ಯಾರ್ಥಿ ದಿಸೆಯಲ್ಲಿಯೇ ಸಂಪಾದಿಸಿದ್ದರು. ತಂದೆ ಮಹಾದೇವಯ್ಯ, ತಾಯಿ ಬಸಮ್ಮ ದಂಪತಿಯ ಪುತ್ರರಾದ ಅವರು ಹುಟ್ಟೂರಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ನಂತರ ಅವರು ಕಾಶಿಯಲ್ಲಿ ಸಂಸ್ಕೃತಾಭ್ಯಾಸ ಮಾಡಿದರು.
ಶ್ರೀ ಗುರುಶಾಂತರಾಜ ದೇಶಿಕೇಂದ್ರ ಶ್ರೀಗಳ ಅಕಾಲಿಕ ಮರಣದ ನಂತರ ಅವರು 1940ರಲ್ಲಿ ತರಳಬಾಳು ಪೀಠಕ್ಕೆ ಪಟ್ಟಾಭಿಷಿಕ್ತರಾದರು. ಅದಕ್ಕೂ ಪೂರ್ವದಲ್ಲಿ 1933ರಲ್ಲಿ ಯಲಹಂಕ ಮಠದ ಚರಪಟ್ಟಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು. 38 ವರ್ಷಗಳ ಕಾಲ ಪೀಠದಲ್ಲಿದ್ದ ಅವರು ಜಾತಿಮತಗಳ ಭಿನ್ನತೆಯ ಸಂಕೋಲೆಯನ್ನು ದೂರವಿಟ್ಟು ಸಮುದಾಯಗಳ ಆಶೋತ್ತರಗಳನ್ನು ಈಡೇರಿಸಲು ಮುಂದಾಗಿದ್ದರು.
