ಉದಯವಾಹಿನಿ, ಬೆಂಗಳೂರು: ದಾವಣಗೆರೆಯಲ್ಲಿ ರಾತ್ರಿ ಗಣೇಶ ಮೂರ್ತಿ ವಿಸರ್ಜನಾ ವೇಳೆ ನಡೆದ ಘಟನೆಗೆ ಸಂಬಂಧಿಸಿದಂತೆ ಈ ತನಕ 30 ಮಂದಿಯನ್ನು ಬಂಧಿಸಲಾಗಿದೆ ಎಂದು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾದ ಹಿತೇಂದ್ರ ಅವರು ತಿಳಿಸಿದ್ದಾರೆ.
ದಾವಣಗೆರೆಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದ ನಂತರ ಈ ಸಂಜೆಯೊಂದಿಗೆ ಮಾತನಾಡಿದ ಅವರು ದಾವಣಗೆರೆಯಲ್ಲಿ ಪರಿಸ್ಥಿತಿ ಸದ್ಯ ಶಾಂತಿಯುತವಾಗಿದೆ. ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಎಸ್ಪಿ ಅವರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ ಎಂದರು.
ಬೇರೆ ಜಿಲ್ಲೆಗಳಿಂದ ಹೆಚ್ಚುವರಿ ಪೊಲೀಸರನ್ನು ಹಾಗೂ ಕೆಎಸ್ಆರ್ಪಿ ತುಕಡಿಗಳನ್ನು ಕರೆಸಿಕೊಂಡು ಸ್ಥಳದಲ್ಲಿ ನಿಯೋಜಿಸಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಗಸ್ತಿನಲ್ಲಿದ್ದಾರೆ ಎಂದು ತಿಳಿಸಿದರು.
ಕಿಡಿಕೇಡಿಗಳಿಂದ ಕಲ್ಲು ತೂರಾಟ :
ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಮಂಡ್ಯ ಜಿಲ್ಲೆಯ ನಾಗಮಂಗಲ ಪಟ್ಟಣದಲ್ಲಿ ಕಲ್ಲುತೂರಾಟ ನಡೆಸಿ ದಾಂಧಲೆ ನಡೆಸಿದ ಘಟನೆ ಮಾಸುವ ಮುನ್ನವೇ ರಾತ್ರಿ ಇಲ್ಲಿನ ಇಮಾಂನಗರದಲ್ಲಿ ಕಲ್ಲುತೂರಾಟ ನಡೆಸಿ ಕಿಡಿಗೇಡಿಗಳು ಅಟ್ಟಹಾಸ ಮೆರೆದಿದ್ದಾರೆ.ಈ ಘಟನೆಯಿಂದ ನಗರಾದಾದ್ಯಂತ ಭಯದ ವಾತಾವರಣ ಮನೆ ಮಾಡಿದ್ದು, ಕಲ್ಲು ತೂರಾಟ ನಡೆದ ಇಮಾಂ ನಗರದಲ್ಲಿ ರಸ್ತೆಯುದ್ದಕ್ಕೂ ಪೊಲೀಸರು ಬಿಗಿ ಬಂದೋಬಸ್ತ್‌ ಮಾಡಿದ್ದಾರೆ.

ಸ್ಥಳೀಯ ಪೊಲೀಸರ ಜೊತೆಗೆ ಹಾವೇರಿ, ಶಿವಮೊಗ್ಗ ಜಿಲ್ಲೆಗಳ ರಿಸರ್ವ್‌ ಪೊಲೀಸ್‌‍ ತುಕಡಿಗಳು ಸ್ಥಳದಲ್ಲಿ ಬೀಡುಬಿಟ್ಟು, ರಾತ್ರಿಯಿಡೀ ನಿದ್ದೆಗೆಟ್ಟು ಗಸ್ತು ನಡೆಸಿವೆ. ಕೆಲ ಕಾಲ ಈ ಪ್ರದೇಶದಲ್ಲಿ ಉದ್ವಿಘ್ನ ವಾತಾವರಣ ಉಂಟಾಗಿದ್ದು, ಪ್ರಸ್ತುತ ನಗರ ಬೂದಿ ಮುಚ್ಚಿದ ಕೆಂಡದಂತಿದೆ.
ಸ್ಥಳದಲ್ಲಿ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಂಡಿರುವ ಎಸ್ಪಿ ಉಮಾ ಅವರು, ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ.ಈ ಘಟನೆಯಿಂದಾಗಿ ಜನ ಜಂಗುಳಿಯಿಂದ ತುಂಬಿರುತ್ತಿದ್ದ ಇಮಾಂ ನಗರದ ಜನನಿಬಿಡ ರಸ್ತೆಗಳು ಬೆಳ್ಳಂಬೆಳ್ಳಗ್ಗೆ ಖಾಲಿಖಾಲಿಯಾಗಿದ್ದು ಬಿಕೊ ಎನ್ನುತ್ತಿವೆ.ಇಲ್ಲಿರುವ ಮಸೀದಿ ಬಳಿ 10ಕ್ಕೂ ಹೆಚ್ಚು ಪೊಲೀಸ್‌‍ ವಾಹನಗಳನ್ನು ಸ್ಥಳದಲ್ಲಿರಿಸಿ ಬಿಗಿ ಭದ್ರತೆ ಒದಗಿಸಲಾಗಿದೆ. ಹಾಗೆಯೇ ಬೆಳಗಿನ ಜಾವ 5 ಗಂಟೆಗೆ ವ್ಯಾಪಾರ ವಹಿವಾಟಿಗೆ ತೆರಳುತಿದ್ದ ಜನರು ತಡವಾಗಿ ಹೊರಬರುತ್ತಿದ್ದು ನಾಗರಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

Leave a Reply

Your email address will not be published. Required fields are marked *

error: Content is protected !!