ಉದಯವಾಹಿನಿ, ಮೈಸೂರು: ಹೆಸರಾಂತ ಸಾಹಿತಿ ಹಂಪನಾಗರಾಜಯ್ಯ ಅವರನ್ನು ಐತಿಹಾಸಿಕ ಮೈಸೂರು ದಸರಾ ಉದ್ಘಾಟನೆಗೆ ಆಹ್ವಾನಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ದಸರಾ ಉದ್ಘಾಟನೆಗೆ ಗಣ್ಯರನ್ನು ಆಯ್ಕೆ ಮಾಡುವ ಕುರಿತು ನಿರ್ಧಾರ ತೆಗೆದುಕೊಳ್ಳಲು ಸಚಿವ ಸಂಪುಟ ಸಭೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ ನನಗೆ ಅವಕಾಶ ನೀಡಿತ್ತು. ಅದರ ಅನ್ವಯ ಹಂಪನಾಗರಾಜಯ್ಯ ಅವರನ್ನು ಆಹ್ವಾನಿಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದರು.
ರಾಜ್ಯಾದ್ಯಂತ 60 ಸಾವಿರಕ್ಕೂ ಹೆಚ್ಚು ಗಣಪತಿ ಉತ್ಸವಗಳು ನಡೆದಿವೆ. ಅದರಲ್ಲಿ ನಾಗಮಂಗಲ ಮತ್ತು ದಾವಣಗೆರೆ ಸೇರಿ ಎರಡು ಕಡೆ ಗಲಭೆಗಳಾಗಿವೆ. ದಾವಣೆಗೆರೆಯಲ್ಲಿ ಕಲ್ಲು ತೂರಾಟವಾಗಿದೆ, ನಾಗಮಂಗಲದಲ್ಲಿ ಅಂಗಡಿಗಳನ್ನು ಸುಟ್ಟು ಹಾಕಲಾಗಿದೆ ಘಟನೆಯಲ್ಲಿ ಪೊಲೀಸರ ವೈಫಲ್ಯ ಕಂಡುಬಂದಿದೆ. ಇನ್‌್ಸಪೆಕ್ಟರ್ ಹಾಗೂ ಡಿವೈಎಸ್ಪಿ ಅವರನ್ನು ಅಮಾನತು ಗೊಳಿಸಲಾಗಿದೆ ಎಂದರು.
ರಾಜ್ಯದಲ್ಲಿ ಕೋಮು ಗಲಭೆಗೆ ಬಿಜೆಪಿಯವರೇ ಕಾರಣ. ಅವರ ಪ್ರಚೋದನೆಯಿಂದಲೇ ಗಲಾಟೆಗಳಾಗುತ್ತಿವೆ. ಮುಂದಿನ ದಿನಗಳಲ್ಲಿ ಗಣೇಶೋತ್ಸವ ಹಾಗೂ ಇತರ ಸಂದರ್ಭಗಳಲ್ಲಿ ಶಾಂತಿ ಪಾಲನೆಗೆ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
