ಉದಯವಾಹಿನಿ, ಬೆಂಗಳೂರು: ಜನಪ್ರತಿನಿಧಿಯಾಗಿ ಶಾಸಕ ಮುನಿರತ್ನ ಅವರು ಮಾಡಿರುವ ಕೃತ್ಯಗಳ ವಿರುದ್ಧ ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಿಳೆಯೊಬ್ಬರು ದೂರು ನೀಡಿದ್ದಾರೆ. ಅದರ ಅನುಸಾರ ಪ್ರಕರಣ ದಾಖಲಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ನನ್ನ ಬಳಿ ಹೆಚ್ಚಿನ ಮಾಹಿತಿ ಇಲ್ಲ. ಹಾಗಾಗಿ ವ್ಯಾಪಕ ವಿವರಣೆ ನೀಡುವುದಿಲ್ಲ ಎಂದರು.
ದೂರಿನಲ್ಲಿ ನಮೂದಿಸಿರುವಂತಹ ಕೃತ್ಯ ಮಾಡುವುದನ್ನು ಯಾರೂ ಒಪ್ಪಿಕೊಳ್ಳುವುದಿಲ್ಲ. ಅದರಲ್ಲೂ ಜನಪ್ರತಿನಿಧಿಗಳಾಗಿ ಕಾನೂನುಬಾಹಿರವಾಗಿ ಈ ರೀತಿ ಕೆಲಸಗಳನ್ನು ಮಾಡಿದ್ದಾರೆ ಎಂದರೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.
ನಾವು ಯಾವುದೇ ದ್ವೇಷದ ರಾಜಕಾರಣ ಮಾಡಿಲ್ಲ. ನಾಗಮಂಗಲದ ಗಲಭೆ ವಿಚಾರವಾಗಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರು ಹಾಗೂ ಮತ್ತಿತರರು ನೀಡಿರುವ ಹೇಳಿಕೆಗಳಿಗೆ ಪ್ರತಿಕ್ರಿಯಿಸುವ ಅಗತ್ಯವಿಲ್ಲ. ನಾವು ಕಾನೂನುಬಾಹಿರವಾಗಿ ಯಾವುದನ್ನೂ ಮಾಡುವುದಿಲ್ಲ. ದ್ವೇಷ ರಾಜಕಾರಣ ನಮಗೆ ಅಗತ್ಯವೇ ಇಲ್ಲ ಎಂದರು.
ಒಂದು ದೇಶ, ಒಂದು ಚುನಾವಣೆ ವಿಚಾರವಾಗಿ ಇನ್ನಷ್ಟು ವಿಚಾರಣೆ ನಡೆಯಬೇಕು. ಕನಿಷ್ಠ 2/3 ರಾಜ್ಯಗಳ ಒಪ್ಪಿಗೆ ಬೇಕು. ಮಾಜಿ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಅವರ ಉನ್ನತಾಧಿಕಾರ ಸಮಿತಿ ವರದಿ ನೀಡಿದೆ. ಮುಂದೆ ಯಾವ ರೀತಿ ಬೆಳವಣಿಗೆಯಾಗಲಿದೆ ಎಂದು ಕಾದುನೋಡಬೇಕಿದೆ.

 

 

Leave a Reply

Your email address will not be published. Required fields are marked *

error: Content is protected !!