ಉದಯವಾಹಿನಿ, ಬೆಂಗಳೂರು: ಮೀಸಲಾತಿ ಕುರಿತು ಅಮೆರಿಕದ ಸಂವಾದದಲ್ಲಿ ಹೇಳಿಕೆ ನೀಡಿದ್ದ ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಮೇಲೆ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಬಿಜೆಪಿ ಹೈಗ್ರೌಂಡ್ ಪೊಲೀಸ್ ಠಾಣೆಗೆ ದೂರು ನೀಡಿದೆ.
ವಿಧಾನಪರಿಷತ್‌ನ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ವಿಧಾನಪರಿಷತ್‌ನ ಮುಖ್ಯ ಸಚೇತಕ ಎನ್.ರವಿಕುಮಾರ್, ಶಾಸಕ ಬಸವರಾಜ್ ಮತ್ತಿಮೋಡ, ಮಾಜಿ ಶಾಸಕ ರಾಜ್‌ಕುಮಾರ್ ತೇಲ್ಕೂರ್, ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್, ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಎಚ್.ವಿ.ಮಂಜುನಾಥ್, ಬಿಜೆಪಿ ಕಾನೂನು ಪ್ರಕೋಷ್ಟದ ಸಂಚಾಲಕ ವಸಂತ್‌ಕುಮಾರ್, ಶಾಸಕರು, ಮಾಜಿ ಶಾಸಕರ ನೇತೃತ್ವದಲ್ಲಿ ದೂರು ದಾಖಲಿಸಲಾಗಿದೆ.
ರಾಹುಲ್ ಗಾಂಧಿಯವರು ಮೀಸಲಾತಿ ಕುರಿತಂತೆ ನೀಡಿರುವ ಹೇಳಿಕೆಯಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದವರು, ಹಿಂದುಳಿದ ಸಮುದಾಯದಲ್ಲಿ ಆತಂಕ ಉಂಟಾಗಿದೆ. ಮೀಸಲಾತಿ ರದ್ದುಪಡಿಸುತ್ತೇವೆ ಎಂದು ಹೇಳಿರುವುದು ಸಂವಿಧಾನ ವಿರೋಧಿ ನಡೆಯಾಗಿದ್ದು, ಅವರ ವಿರುದ್ಧ ತಕ್ಷಣವೇ ಕಾನೂನು ಕ್ರಮ ಜರುಗಿಸಬೇಕೆಂದು ದೂರಿನಲ್ಲಿ ಮನವಿ ಮಾಡಲಾಗಿದೆ.
