ಉದಯವಾಹಿನಿ, ಬೆಂಗಳೂರು: ಕಳೆದ ಶನಿವಾರ (ಮೇ 20) ಕಂಠೀರವ ಸ್ಟೇಡಿಯಂನಲ್ಲಿ 8 ಮಂದಿ ಸಚಿವರೊಂದಿಗೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಹಾಗೂ ಡಿ.ಕೆ.ಶಿವಕುಮಾರ್ ಅವರು ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದರು. ಇದಾದ ಒಂದು ವಾರದ ಬಳಿಕ ಸಂಪುಟ ವಿಸ್ತರಣೆಯಾಗಿದ್ದು, ಇಂದು (ಮೇ 27) ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ 24 ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಿದರು.ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ನೂತನ ಸಚಿವರಿಗೆ ಪ್ರತಿಜ್ಞಾವಿಧಿಯನ್ನು ಬೋದಿಸಿದರು.ಎಚ್.ಕೆ ಪಾಟೀಲ್, ಎನ್ ಚಲುವನಾರಾಯಣ ಸ್ವಾಮಿ, ಕೆ. ವೆಂಕಟೇಶ್, ಈಶ್ವರ್ ಖಂಡ್ರೆ, ಶರಣಬಸಪ್ಪ ದರ್ಶನಾಪುರ, ತಿಮ್ಮಾಪೂರ್ ರಾಮಪ್ಪ ಬಾಲಪ್ಪ, ಎಸ್.ಎಸ್. ಮಲ್ಲಿಕಾರ್ಜುನ್, ಶಿವರಾಜ ತಂಗಡಗಿ, ಶರಣ ಪ್ರಕಾಶ್ ಪಾಟೀಲ್, ಮಂಕಾಳ ವೈದ್ಯ, ಡಿ. ಸುಧಾಕರ್, ಸಂತೋಷ್ ಲಾಡ್, ಎನ್.ಎಸ್. ಬೋಸೆರಾಜು, ಬೈರತಿ ಸುರೇಶ್, ಮಧು ಬಂಗಾರಪ್ಪ, ಎಂ.ಸಿ. ಸುಧಾಕರ್ ಮತ್ತು ಬಿ.ನಾಗೇಂದ್ರ ಅವರು ದೇವರ ಹೆಸರಿನಲ್ಲಿ ಪ್ರಮಾಣ ವಚನವನ್ನು ಸ್ವೀಕರಿಸಿದರು.ಡಾ.ಎಚ್. ಸಿ. ಮಹಾದೇವಪ್ಪ ಅವರು ಸತ್ಯ ನಿಷ್ಠೆ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರೆ, ಕೆ.ಎನ್. ರಾಜಣ್ಣ ಅವರು ಬುದ್ಧ, ಬಸವ, ಅಂಬೇಡ್ಕರ್ ಹಾಗೂ ವಾಲ್ಮಿಕಿ ಮಹರ್ಷಿ ಹೆಸರಿನಲ್ಲಿ ಪ್ರಮಾಣ ಮಾಡಿದರು. ಶಿವಾನಂದ ಪಾಟೀಲ್ ಅವರು ಬಸವಣ್ಣನ ಹೆಸರಿನಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಲಕ್ಷ್ಮೀ ಹೆಬ್ಬಾಳ್ಕರ್ ಅವರು ಬಸವಣ್ಣ, ಶಿವಾಜಿ ಹಾಗೂ ಅಂಬೇಡ್ಕರ್ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ರಹೀಂ ಖಾನ್ ಅವರು ಅಲ್ಲಾ ಹೆಸರಿನಲ್ಲಿ ಇಂಗ್ಲಿಷ್ನಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಕೃಷ್ಣ ಭೈರೇಗೌಡ ಹಾಗೂ ದಿನೇಶ್ ಗುಂಡೂರಾವ್ ಅವರು ಯಾರ ಹೆಸರನ್ನೂ ಉಲ್ಲೇಖಸದೇ ಶ್ರದ್ಧಾಪೂರ್ವಕವಾಗಿ ದೃಢೀಕರಣ ಮಾಡುತ್ತೇನೆ ಎನ್ನುವ ಮೂಲಕ ಪ್ರಮಾಣ ವಚನ ಸ್ವೀಕರಿಸಿದರು.
